Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಪ್ರಮಾಣೀಕೃತ ಉತ್ತರಗಳಿಗಿಂತ ನೈಜ ವ್ಯಕ್ತಿತ್ವ, ಉತ್ಸಾಹ ಹೆಚ್ಚು ಮುಖ್ಯ : ಭಾಗ್ಯಚಂದ್ರ ರಾವ್

Share

ಯಲಹಂಕ : ಔದ್ಯೋಗಿಕ ‌ಜಗತ್ತಿನಲ್ಲಿ ಪ್ರಮಾಣೀಕೃತ ಉತ್ತರಗಳಿಗಿಂತ ನಿಜವಾದ ವ್ಯಕ್ತಿತ್ವ ಮತ್ತು ಉತ್ಸಾಹ ಹೆಚ್ಚು ಮುಖ್ಯವಾದದ್ದು‌ ಎಂದು ವೆಂಟ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಭಾಗ್ಯಚಂದ್ರ ರಾವ್ ಅಭಿಪ್ರಾಯ ಪಟ್ಟರು.

ನಗರದ ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ 16ನೇ ಪದವಿ ಪ್ರದಾನ(ಸ್ನಾತಕ ಹಾಗೂ ಸ್ನಾತಕೋತ್ತರ) ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು‌ ‘ವೃತ್ತಿಪರ ಜಗತ್ತಿಗೆ ಅಥವಾ ಉದ್ಯಮಶೀಲತೆಗೆ ಕಾಲಿಡುವ ಪ್ರತಿ ವ್ಯಕ್ತಿ ಕಲಿಯಬೇಕಾದ ಮೊದಲ ಪಾಠವೆಂದರೆ ಯಾವಾಗಲೂ ನೀವು ನೀವಾಗಿರಿ, ನಿಮ್ಮ ವೃತ್ತಿಜೀವನದ ಆರಂಭದಲ್ಲಿ ಕೇವಲ ಆರಂಭಿಕ ವೇತನದ ಮೇಲೆ ಗಮನಹರಿಸುವ ಬದಲು, ಕಲಿಕೆ, ಉತ್ತಮ ಕೆಲಸದ ವಾತಾವರಣ ಮತ್ತು ಮಾರ್ಗದರ್ಶನಕ್ಕೆ ಪ್ರಾಮುಖ್ಯತೆ ನೀಡಿ. ಅನಿಶ್ಚಿತ ಜಗತ್ತನ್ನು ಎದುರಿಸಲು, ಕೃತಕ ಬುದ್ಧಿಮತ್ತೆಗೆ ಹೊಂದಿಕೊಳ್ಳಲು ಮತ್ತು ಬೆಳೆಯುತ್ತಿರುವ ಆರ್ಥಿಕ ಅವಕಾಶಗಳನ್ನು ಬಳಸಿಕೊಳ್ಳಲು ನಿರಂತರ ಕಲಿಕೆಯ ಮೂಲಕ ಬೆಳವಣಿಗೆಯ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ. ನಿಮ್ಮ ಪ್ರಯತ್ನಗಳನ್ನು ಪ್ರಶ್ನಾತೀತ ಪ್ರಾಮಾಣಿಕತೆ ಮತ್ತು ಮೂಲಭೂತ ಮೌಲ್ಯಗಳಲ್ಲಿ ಗಟ್ಟಿಯಾಗಿರಿಸಿಕೊಂಡು ಮುನ್ನಡೆಯಿರಿ. ಯಾವಾಗಲೂ ಸರಿಯಾದದ್ದನ್ನೇ ಮಾಡುವ ಮೂಲಕ ಅರ್ಥಪೂರ್ಣ ನಂಬಿಕೆಯನ್ನು ನಿರ್ಮಿಸಿಕೊಳ್ಳಿ. ನಿಮ್ಮ ಹೆತ್ತವರು ಮತ್ತು ಮಾರ್ಗದರ್ಶಕರ ತ್ಯಾಗಗಳ ಕುರಿತು ಆಳವಾದ ವಿನಯ, ಕೃತಜ್ಞತೆಯನ್ನು ಸದಾ ಎದೆಯಲ್ಲಿಟ್ಟುಕೊಂಡು ಮುನ್ನಡೆಯಿರಿ ಎಂದು ಪದವಿ ಪೂರ್ಣಗೊಳಿಸಿ ಉದ್ಯೋಗ ಹರಸಿ ಹೊರ ನಡೆಯುವ ಪದವೀಧರರಿಗೆ ಸಲಹೆ ನೀಡಿದರು.

ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ಧ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ವಿಶಾಲ್ ಹೆಗ್ಡೆ ಅವರು ಮಾತನಾಡಿ ಪದವಿ ‘ಪದವಿಯು ಶಿಕ್ಷಣದ ಅಂತ್ಯವಲ್ಲ, ಬದಲಿಗೆ ಜೀವನಪರ್ಯಂತ ಮುಂದುವರಿಯುವ ಒಂದು ಸುದೀರ್ಘ ಪಯಣದ ಆರಂಭ. ಇಲ್ಲಿ ವೃತ್ತಿಪರ ಯಶಸ್ಸು ಸಿಗಬೇಕಾದರೆ, ಪ್ರತಿದಿನ ಯಾವುದು ಸರಿಯಾಯಿತು ಮತ್ತು ಯಾವುದು ತಪ್ಪಾಯಿತು ಎಂಬುದರ ಆತ್ಮಾವಲೋಕನ ಅತ್ಯಗತ್ಯ. ನಿಮ್ಮ ನಿಜವಾದ ಬೆಳವಣಿಗೆಯು, ತಕ್ಷಣವೇ ಪ್ರತಿಕ್ರಿಯಿಸಲು ತುಡಿಯುವ ಬದಲು, ಮನಸ್ಸನ್ನು ಶಾಂತವಾಗಿಟ್ಟುಕೊಂಡು ಆಲಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದರ ಮೇಲೆ ಅವಲಂಬಿತವಾಗಿದೆ ಎಂದು ಕಿವಿ ಮಾತು ಹೇಳಿದರು.

ನಿಟ್ಟೆ ಶಿಕ್ಷಣ ಸಂಸ್ಥೆಯ ಟ್ರಸ್ಟಿ ರೋಹಿತ್ ಪೂಂಜ ಅವರು ನೂತನ ಪದವೀಧರರಿಗೆ ತೈತ್ತಿರೀಯ ಉಪನಿಷತ್ ನಲ್ಲಿರುವ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಘಟಿಕೋತ್ಸವ ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಹೆಚ್.ಸಿ.ನಾಗರಾಜ್, ಉಪ ಪ್ರಾಂಶುಪಾಲ ಡಾ. ಜೆ.ಸುಧೀರ್ ರೆಡ್ಡಿ, ಸಂಸ್ಥೆಯ ಪರೀಕ್ಷಾ ನಿಯಂತ್ರಕ ಡಾ.ಪ್ರಶಾಂತ್ ವಿ ಸೇರಿದಂತೆ ಸ್ನಾತಕ, ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ಪೋಷಕರು ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಘಟಿಕೋತ್ಸವ ಸಮಾರಂಭದಲ್ಲಿ ಅತ್ಯುತ್ತಮ ಶೈಕ್ಷಣಿಕ ಕ್ಷಮತೆ ದಾಖಲಿಸಿ 9.91 ಸಿ.ಜಿ.ಪಿ.ಎ ಅಂಕ ಗಳಿಸಿದ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಸಂಜಯ್ ಪಾಟೀಲ್ ಎಂ ಪ್ರತಿಷ್ಠಿತ ನಿಟ್ಟೆ ಗುಲಾಬಿಶೆಟ್ಟಿ ಸ್ಮರಣಾರ್ಥ ಚಿನ್ನದ ಪದಕ, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಎಸ್. ಹರಿಪ್ರಿಯ ಅವರಿಗೆ ಅತ್ಯುತ್ತಮ ವಿದ್ಯಾರ್ಥಿನಿಗೆ ಸಲ್ಲುವ ನಿಟ್ಟೆ ಮೀನಾಕ್ಷಿ ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡೇಟಾ ಸೈನ್ಸ್ ವಿಭಾಗದ ಅಭಿಶೇಕ್ ಅವರಿಗೆ ಅತ್ಯುತ್ತಮ ವಿದ್ಯಾರ್ಥಿಗೆ ನೀಡುವ ಜಸ್ಟಿಸ್ ಕೆ.ಎಸ್.ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ಘಟಿಕೋತ್ಸವ ಸಮಾರಂಭದಲ್ಲಿ 1159 ವಿದ್ಯಾರ್ಥಿಗಳು ಸ್ನಾತಕ ಪದವಿ, 243 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗಳನ್ನು ಸ್ವೀಕರಿಸಿದರು. ಶೈಕ್ಷಣಿಕವಾಗಿ ಅಗ್ರಸ್ಥಾನ ಪಡೆದ ಪ್ರತಿಭಾವಂತ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 14 ಚಿನ್ನದ ಪದಕಗಳು ಹಾಗೂ 101 ರ‍್ಯಾಂಕ್ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು.

Written by

Bayalu Simha

Leave a Reply

Your email address will not be published. Required fields are marked *