Skip to content
Sunday, 4 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಉತ್ತಮ ಗುಣಮಟ್ಟದ ಹಾಲು ಪೂರೈಸಿ: ದೇಶಿಹಳ್ಳಿ ಡೇರಿಗೆ ನಂ.1 ಸ್ಥಾನ ತಂದುಕೊಡಿ

Share

ಬಂಗಾರಪೇಟೆ :ನಗರಕ್ಕೆ ಹೊಂದಿಕೊಂಡಿರುವ ದೇಶಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲು ಪೂರೈಸುವ ಮೂಲಕ ಇಡೀ ತಾಲೂಕಿನಲ್ಲಿ ಅತಿ ಹೆಚ್ಚು ಲಾಭ ಗಳಿಸುವ ಡೇರಿಯಾಗಿ ಹೊರಹೊಮ್ಮಿಸಲು ರೈತರು ಸಹಕರಿಸಬೇಕು ಎಂದು ಸಂಘದ ಅಧ್ಯಕ್ಷ ಜಿ. ನಾರಾಯಣ್ ಕರೆ ನೀಡಿದರು.

ತಾಲೂಕಿನ ದೇಶಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಾಲು ಉತ್ಪಾದನೆಯನ್ನು ಉತ್ತೇಜಿಸಲು ಕೋಮುಲ್‌ನಿಂದ ರೈತರಿಗೆ ದೊರೆಯಬೇಕಾದ ವಿವಿಧ ಸೌಲಭ್ಯಗಳನ್ನು ಕ್ರಮಬದ್ಧವಾಗಿ ಒದಗಿಸಲಾಗುತ್ತಿದೆ. ರೈತರು ಲಭ್ಯವಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಹಾಲಿನ ಉತ್ಪಾದನೆ ಹಾಗೂ ಗುಣಮಟ್ಟ ಹೆಚ್ಚಿಸಬೇಕು. ಗುಣಮಟ್ಟದ ಹಾಲು ಪೂರೈಕೆಯಿಂದ ಸಂಘದ ಆರ್ಥಿಕ ಸ್ಥಿತಿ ಮತ್ತಷ್ಟು ಬಲಪಡಿಸಲು ಸಾಧ್ಯವಾಗಲಿದೆ ಎಂದರು.

₹4.78 ಲಕ್ಷ ನಿವ್ವಳ ಲಾಭ:

ಸಭೆಯಲ್ಲಿ 2024–25 ಹಾಗೂ 2025–26ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮತ್ತು ನಿವ್ವಳ ಲಾಭದ ವಿಲೇವಾರಿ ಕುರಿತು ಮಂಡಿಸಿ ಅನುಮೋದಿಸಲಾಯಿತು. ಸಂಘವು ₹94,28,128.40 ಮೌಲ್ಯದ ಹಾಲು ಖರೀದಿಸಿದ್ದು, ₹13,40,376.39 ವ್ಯಾಪಾರ ಲಾಭ (14.2%) ಹಾಗೂ ₹4,78,083.52 ನಿವ್ವಳ ಲಾಭ (5.1%) ಗಳಿಸಿದೆ.
ಸಂಘದ ಷೇರು ಮೊತ್ತ ₹11,210 ಇದೆ. ಸಂಘಕ್ಕೆ ಹಾಲು ಪೂರೈಸಿದ ಉತ್ಪಾದಕರಿಗೆ ಪ್ರತಿ ₹100ಕ್ಕೆ ₹2.17ರಂತೆ ಬೋನಸ್ ನೀಡಲು ಸಭೆಯಲ್ಲಿ ದೃಢೀಕರಿಸಲಾಯಿತು.

ವಿವಿಧ ನಿಧಿಗಳಿಗೆ ಲಾಭ ಹಂಚಿಕೆ:

ನಿವ್ವಳ ಲಾಭದಿಂದ ಆಪದ್ಧನ ನಿಧಿಗೆ ಶೇ.25ರಂತೆ ₹1,19,520.88, ಸಹಕಾರ ಶಿಕ್ಷಣ ನಿಧಿಗೆ ಶೇ.2ರಂತೆ ₹7,171.25 ಹಾಗೂ ಕಟ್ಟಡ ನಿಧಿಗೆ ಶೇ.10ರಂತೆ ₹35,139.14 ಮೀಸಲಿಡಲಾಗಿದೆ. ಷೇರು ಡಿವಿಡೆಂಡ್‌ಗೆ ₹1,121 ನಿಗದಿಪಡಿಸಲಾಗಿದೆ.

ಉಳಿಕೆ ಮೊತ್ತ ₹3,15,131.25ರಲ್ಲಿ ಸದಸ್ಯರ ಬೋನಸ್‌ಗೆ ₹2,04,835.31, ಸಿಬ್ಬಂದಿ ಬೋನಸ್‌ಗೆ ₹31,513.12, ದಾನಧರ್ಮ ನಿಧಿಗೆ ₹31,513.12, ರಾಸುಗಳ ಅಭಿವೃದ್ಧಿ ನಿಧಿಗೆ ₹15,756.56, ಸದಸ್ಯರು ಹಾಗೂ ಸಿಬ್ಬಂದಿ ವಿಮಾ ನಿಧಿಗೆ ₹15,756.56 ಮತ್ತು ಸಹಕಾರ ಅಭಿವೃದ್ಧಿ ನಿಧಿಗೆ ₹15,756.56 ವಿಲೇವಾರಿ ಮಾಡಲು ನಿರ್ಧರಿಸಲಾಯಿತು.

ಸಹಕಾರ ಸಂಘ ಬಲವರ್ಧನೆಗೆ ರೈತರ ಸಹಕಾರ ಅಗತ್ಯ

ಮುಖ್ಯ ಅತಿಥಿಯಾಗಿ ಮಾತನಾಡಿದ ವಿಸ್ತರಣಾಧಿಕಾರಿ ಕಿರಣ್ ಕುಮಾರ್, ಸಹಕಾರ ಸಂಘಗಳ ಬಲವರ್ಧನೆಗೆ ಹಾಲು ಉತ್ಪಾದಕರ ಸಹಕಾರ ಅತ್ಯಗತ್ಯ. ಸಂಘದ ವಿವಿಧ ಯೋಜನೆಗಳು ಹಾಗೂ ಕ್ಷೀರ ಉತ್ಪಾದಕರಿಗೆ ಲಭ್ಯವಿರುವ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಸಂಘವು ಪ್ರಸಕ್ತ ಸಾಲಿನಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, ಮುಂದಿನ ದಿನಗಳಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸುವುದು ಹಾಗೂ ರೈತರ ಹಿತರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿತು.

ಈ ಸಂದರ್ಭದಲ್ಲಿ ಡೇರಿ ಉಪಾಧ್ಯಕ್ಷ ಆರ್. ರಾಮಸ್ವಾಮಿ, ನಿರ್ದೇಶಕರಾದ ಚಲಪತಿ, ಎಂ. ವೆಂಕಟಚಲಪತಿ, ಕಣ್ಣನ್, ಆರ್. ನಾಗರಾಜ್, ಸತ್ಯನಾರಾಯಣ, ಆನಂದ, ವಿ. ಕೃಷ್ಣಮೂರ್ತಿ, ಶರವಣ ಕುಮಾರ್, ಕಸ್ತೂರಿ, ನಾಗಮ್ಮ, ಮುಖ್ಯ ಕಾರ್ಯನಿರ್ವಾಹಕ ಡಿ. ರಾಮಚಂದ್ರಪ್ಪ, ಹಾಲು ಪರೀಕ್ಷಕ ಅಮರ ನಾರಾಯಣಸ್ವಾಮಿ ಸೇರಿದಂತೆ ಸಂಘದ ಸಿಬ್ಬಂದಿ ಹಾಗೂ ನೂರಾರು ಹಾಲು ಉತ್ಪಾದಕ ರೈತರು ಸಭೆಯಲ್ಲಿ ಉಪಸ್ಥಿತರಿದ್ದರು.

Written by

Bayalu Simha

Leave a Reply

Your email address will not be published. Required fields are marked *