ಯಲಹಂಕ : ದಿನಾಂಕ 15.08.2026ರಂದು ನಗರದ ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಪದವಿ ಪೂರ್ವ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ನಡೆಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಶೋಕ್ ಪಿ ನಾರಂಗ್ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಈಗಲ್ ಐ ಸೆಕ್ಯೂರಿಟಿ ಸರ್ವೀಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ನಿವೃತ್ತ ಕ್ಯಾಪ್ಟನ್ ಶಿವ ಸುಬ್ರಹ್ಮಣ್ಯಮ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಮಹನೀಯರನ್ನು ಸ್ಮರಿಸುತ್ತಾ ಪ್ರಜಾಪ್ರಭುತ್ವದ ಹೆಗ್ಗಳಿಕೆಗೆ ಕೃತಜ್ಞತೆಯನ್ನು ಸಲ್ಲಿಸಿದರು. ವಿದ್ಯಾರ್ಥಿಗಳಾದ ನೀವು ಸವಾಲುಗಳನ್ನು ಸ್ವೀಕರಿಸಿ ಈಡೇರಿಸುವ ಪಣ ತೊಡಬೇಕು; ಭವ್ಯ ಭಾರತದ ಶ್ರೇಷ್ಠ ಪ್ರಜೆಯಾಗಿ ಸಾರ್ಥಕತೆ ಮೆರೆಯಬೇಕೆಂದು ಅವರು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ ನಂದ ಎನ್ ಅವರು ಗಣ್ಯರನ್ನು ಸ್ವಾಗತಿಸುತ್ತಾ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಫಲವಾಗಿ ನಮ್ಮ ದೇಶಕ್ಕೆ ಪ್ರಜಾಪ್ರಭುತ್ವ ದೊರೆತಿದ್ದು ನಾವು ಸದೃಢ ಭಾರತ ಕಟ್ಟುವ ಸಂಕಲ್ಪ ತೊಡಬೇಕೆಂದು ಅವರು ಸಲಹೆ ನೀಡಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೀರ ಯೋಧ ಸಂದೀಪ್ ಉನ್ನಿಕೃಷ್ಣನ್ ಸ್ಮರಣಾರ್ಥ ನೃತ್ಯ ರೂಪಕವನ್ನು ಅದ್ಭುತವಾಗಿ ಪ್ರದರ್ಶಿಸಿದರು. ದೇಶಕ್ಕಾಗಿ ವೀರ ಮರಣವನ್ನಪ್ಪಿದ ಸಂದೀಪ್ ಉನ್ನಿಕೃಷ್ಣನ್ ಅವರ ರಾಷ್ಟ್ರ ಪ್ರೇಮವನ್ನು ಮನ ಮುಟ್ಟುವಂತೆ ಅಭಿನಯಿಸಿದ ವಿದ್ಯಾರ್ಥಿಗಳ ನರ್ತನಕ್ಕೆ ಪ್ರೇಕ್ಷಕರು ಭಾವುಕರಾದರು. ವಿದ್ಯಾರ್ಥಿಗಳ ಅಮೋಘ ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಜೊತೆಗೆ ದೇಶಭಕ್ತಿ ಗೀತೆ, ಇನ್ನಿತರ ದೇಶಭಕ್ತಿಯ ನೃತ್ಯಗಳೊಂದಿಗೆ ವಿದ್ಯಾರ್ಥಿ ಗಳು ರಾಷ್ಟ್ರಭಕ್ತಿಯಯನ್ನು ಮೆರೆದರು.

ಸಮಾರಂಭದಲ್ಲಿ ಸಿಂಧಿ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ರಾಜೇಶ್ ಎಂ ಬಜಾಜ್ ಗೌರವ ಖಜಾಂಚಿ ಶ್ರೀ ರೋಹಿತ್ ಆರ್ ಕುಕ್ರೇಜ ಹಾಗೂ ಗೌರವ ಜಂಟಿ ಕಾರ್ಯದರ್ಶಿಗಳಾದ ಶ್ರೀಮತಿ ಪೂಜಾ ಠಕ್ಕರ್ ಉಪಸ್ಥಿತರಿದ್ದರು. ಸಿಂಧಿ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಎಫ್ ಮಾಧ್ವಾನಿಯವರು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಸಂದೇಶ ನೀಡಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥೆ ಶ್ರೀಮತಿ ಲಾವಣ್ಯ ಅವರು ವಂದನಾರ್ಪಣೆ ಸಲ್ಲಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿಯರಾದ ಪದ್ಮಪ್ರಿಯಾ ಅವರು ಸಮಾರಂಭದ ನಿರೂಪಣೆ ಮಾಡಿದರು. ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು.



