ಯಲಹಂಕ : “ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶಗಳು ಕಡಿಮೆಯಾಗಿಲ್ಲ, ಆದರೆ, ಉದ್ಯೋಗ ಪಡೆಯಲು ಅಗತ್ಯವಿರುವ ಕೌಶಲ್ಯ ಕಡಿಮೆಯಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅಭಿಪ್ರಾಯಪಟ್ಟರು.
ಬಿಎಂಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ಬೆಳ್ಳಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ” “ಕಾಲೇಜುಗಳು ವಿದ್ಯಾರ್ಥಿಗಳಿಗೆ ಸಾಮಾನ್ಯ ಮತ್ತು ಸಾಂಪ್ರದಾಯಿಕ ಶಿಕ್ಷಣದ ಬದಲು ಕೈಗಾರಿಕೆಗಳು ಬಯಸುವಂತಹ ಶಿಕ್ಷಣ ನೀಡಬೇಕಿದೆ. ನಾವು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ. ಕೈಗಾರಿಕೆ ಬಯಸುವ ರೀತಿಯಲ್ಲಿ ನಾವು ಪಠ್ಯಕ್ರಮದಲ್ಲಿ ಬದಲಾವಣೆ ತಂದಿದ್ದೇವೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಿಮ್ಯಾಂಡ್ ಆಧಾರಿತ ಪರೀಕ್ಷೆಯನ್ನು ನಾವು ಜಾರಿಗೆ ತರುತ್ತಿದ್ದೇವೆ. ಪ್ರತಿ ವರ್ಷ ಅಂದಾಜು 1 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪದವೀಧರಾಗಿ ಹೊರಹೊಮ್ಮುತ್ತಿದ್ದಾರೆ. ಆದರೆ, ಇದರಲ್ಲಿ ಎಷ್ಟು ಮಂದಿಗೆ ಉದ್ಯೋಗ ಸಿಗುತ್ತಿದೆ ಎಂಬುದು ಪ್ರಶ್ನಾರ್ಥಕವಾಗಿದೆ, ಹೀಗಾಗಿ ನೀವು ಉದ್ಯೋಗಕ್ಕಾಗಿ ಕಾಯುವ ಬದಲು ಉದ್ಯಮಿ ಗಳಾಗಿ ನೀವೇ ನಾಲ್ಕು ಜನರಿಗೆ ಕೆಲಸ ನೀಡುವಂತಾಗಬೇಕು” ಎಂದರು.
“ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ, ನೂತನ ಲ್ಯಾಬ್ ಗಳನ್ನು ಕಾಲೇಜು ತೆರೆದಿದೆ. ಇದು ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಮೊಬೈಲ್ ನಲ್ಲೇ ಹೆಚ್ಚಿನ ಸಮಯ ಕಳೆಯುವುದನ್ನು ಬಿಟ್ಟು, ಪ್ರಯೋಗಾಲಯದಲ್ಲಿ ತಮ್ಮ ಸಮಯವನ್ನು ವಿನಿಯೋಗಿಸಬೇಕು.” ಎಂದರು.
ಶಾಸಕ ಎಸ್.ಆರ್.ವಿಶ್ವನಾಥ್ , ಅವರು ಮಾತನಾಡಿ ‘ಯಲಹಂಕ ಕ್ಷೇತ್ರದಲ್ಲಿರುವ ಉತ್ತಮ ಎಂಜಿನಿಯರಿಂಗ್ ಕಾಲೇಜ್ ಗಳಲ್ಲಿ ಬಿಎಂಎಸ್ಐಟಿ ಒಂದಾಗಿದ್ದು, ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಪ್ರತಿಭಾವಂತ ಹಾಗೂ ಬಡ ಮಕ್ಕಳಿಗೂ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ನನ್ನ ಇಬ್ಬರು ಮಕ್ಕಳು ಸಹ ಇಲ್ಲೇ ಪದವಿ ಮುಗಿಸಿದ್ದಾರೆ. ವಿದ್ಯಾರ್ಥಿಗಳು ತಾವು ಓದುವ ಜತೆಗೆ ಸಮಾಜ ಸೇವೆ, ದೇಶಸೇವೆಯ ಕಡೆಗೂ ಕೂಡ ಗಮನ ನೀಡಬೇಕು. ದುಶ್ಚಟಗಳಿಗೆ ಬಲಿಯಾಗದೆ, ಸಮಾಜದ ಆಸ್ತಿಯಾಗಿ ಹೊರಹೊಮ್ಮಬೇಕು, ಸಂಸ್ಥೆ ಬೆಳ್ಳಿ ಮಹೋತ್ಸವ ಆಚರಣೆ ಮಾಡಿಕೊಳ್ಳುತ್ತಿರುವುದು ಖುಷಿಯ ವಿಚಾರ. ಶಿಕ್ಷಣ ಕ್ಷೇತ್ರದಲ್ಲಿ ಬಿಎಂಎಸ್ ಶಿಕ್ಷಣ ಸಂಸ್ಥೆ ಮತ್ತಷ್ಟು ಸಾಧನೆ ಮಾಡುವ ಮೂಲಕ ಮತ್ತಷ್ಟು ಉನ್ನತ ಸ್ಥಾನಕ್ಕೇರಲಿ” ಎಂದು ಶುಭ ಹಾರೈಸಿದರು.
ಬಿಎಂಎಸ್ ಐಟಿ ಆಡಳಿತ ಮಂಡಳಿ ಅಧ್ಯಕ್ಷ ಅವಿರಾಮ್ ಶರ್ಮಾ ಮಾತನಾಡಿ ’25 ವರ್ಷಗಳ ಸುದೀರ್ಘ ಪಯಣಯಕ್ಕೆ ಎಲ್ಲರ ಸಹಕಾರ ಬಹಳ ಮುಖ್ಯವಾಗಿದೆ. ಇಂದು ಅವರೆಲ್ಲರನ್ನು ನಾನು ನೆನಪಿಸುವ ಮತ್ತು ಅಭಿನಂದಿಸುವ ಸಮಯ ಇದು. ವಿದ್ಯಾರ್ಥಿಗಳು ಹೊಸದಾಗಿ ಕಲಿಯುವ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು. ನಾವೀನ್ಯತೆ ಕಡೆಗೆ ಹೆಚ್ಚಿನ ಒಲವು ನೀಡಬೇಕು ಎಂದರು.
ಇದೇ ವೇಳೆಯಲ್ಲಿ ಕಾಲೇಜಿನಲ್ಲಿ ಆರಂಭಿಸಿರುವ ವಿವಿಧ ಲ್ಯಾಬ್ ಗಳನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಡಿಫೆನ್ಸ್ ಎಸ್ಟೇಟ್ ಅಧಿಕಾರಿ ದಿವ್ಯ ಹೊಸೂರ್, ಪ್ರಾಂಶುಪಾಲರಾದ ಡಾ.ಎ.ಎಚ್.ಸಂಜಯ್, ಕ್ಯೂ ಎಸ್ – ಐ ಗೇಜ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರವಿ ನಾಯರ್, ಉಪ ಪ್ರಾಂಶುಪಾಲ ಡಾ.ಜಿ.ಎನ್.ಅನಿಲ್ ಸೇರಿದಂತೆ ಇನ್ನಿತರರಿದ್ದರು.
