ಬಂಗಾರಪೇಟೆ: ಸರ್ಕಾರಿ ಕಚೇರಿಗಳ ಸುತ್ತ ಸಾರ್ವಜನಿಕರು ಅಲೆದಾಡುವ ವ್ಯವಸ್ಥೆಗೆ ಕಡಿವಾಣ ಹಾಕಿ, ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಸಾರ್ವಜನಿಕರು ಸಲ್ಲಿಸುವ ಅರ್ಜಿಗಳು ಕಡತಗಳಲ್ಲೇ ಧೂಳು ಹಿಡಿಯುವಂತಾಗಬಾರದು. ಪ್ರತಿಯೊಂದು ಅರ್ಜಿಗೂ ಸೂಕ್ತ ಕ್ರಮ ಕೈಗೊಂಡು ಕಡ್ಡಾಯವಾಗಿ ಹಿಂಬರಹ ನೀಡಬೇಕು ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ ನಿಯಮಿತ ಅಧ್ಯಕ್ಷರು ಕೋಮುಲ್ ನಿರ್ದೇಶಕರು ಡಿಸಿಸಿ ಬ್ಯಾಂಕ್ ನಾಮ ನಿರ್ದೇಶಿತ ಸದಸ್ಯರು ಮತ್ತು ಸ್ಥಳೀಯ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ದೊಡ್ಡೂರು ಕರಪನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಎಂಬ ಘೋಷವಾಕ್ಯದಡಿ ಆಯೋಜಿಸಿದ್ದ ‘ಪ್ರಜಾಸೇವಾ ಆಂದೋಲನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವುದು ಆಂದೋಲನದ ಪ್ರಮುಖ ಉದ್ದೇಶವಾಗಿದೆ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಒಂದೇ ಸ್ಥಳದಲ್ಲಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಬೇಕು. ಸ್ವೀಕರಿಸಿದ ಪ್ರತಿಯೊಂದು ಅರ್ಜಿಯನ್ನು ಗಣಕೀಕರಿಸಿ ಸಂಬಂಧಪಟ್ಟ ಇಲಾಖೆಗೆ ರವಾನಿಸಿ, ಅದರ ವಿಲೇವಾರಿಗೆ ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಬೇಕು ಎಂದರು.
ಅರ್ಜಿಯ ಸ್ಥಿತಿ ಏನು, ಯಾವ ಅಧಿಕಾರಿಯ ಬಳಿ ಕಡತವಿದೆ ಹಾಗೂ ಇದುವರೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ಅರ್ಜಿದಾರರಿಗೆ ನೀಡಬೇಕು. ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ, ನಿರ್ಲಕ್ಷ್ಯ ಹಾಗೂ ಅನಗತ್ಯ ಅಲೆದಾಟಕ್ಕೆ ಅವಕಾಶ ನೀಡಬಾರದು. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಆದ್ಯತೆ ನೀಡುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು
ತಮ್ಮ 13 ವರ್ಷಗಳ ಆಡಳಿತಾವಧಿಯಲ್ಲಿ ಕ್ಷೇತ್ರದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರಸ್ತೆ, ಒಳಚರಂಡಿ, ಹೈಮಾಸ್ಟ್ ದೀಪ, ಕುಡಿಯುವ ನೀರು ಸೇರಿದಂತೆ ಹಲವು ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ನಾರಾಯಣಸ್ವಾಮಿ ಹೇಳಿದರು.
ಬಂಗಾರಪೇಟೆಯಿಂದ ಡಿ.ಕೆ.ಹಳ್ಳಿವರೆಗೆ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ದಾಸರಹೊಸಹಳ್ಳಿಯಿಂದ ಎಚ್.ಜೆ.ಆರ್. ಕಲ್ಯಾಣ ಮಂಟಪದವರೆಗೆ ಅಂಡರ್ಪಾಸ್, ಒಳಚರಂಡಿ ಹಾಗೂ ಸಿ.ಸಿ. ರಸ್ತೆ ನಿರ್ಮಿಸಿ ಮಳೆನೀರು ನುಗ್ಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
₹1 ಕೋಟಿ ವೆಚ್ಚದಲ್ಲಿ ಪಾಲಾರ್ ಸೇತುವೆ
ಕೃಷ್ಣಾವರಂ ವ್ಯಾಪ್ತಿಯ ಪಾಲಾರ್ ಬ್ರಿಡ್ಜ್ಗೆ ₹1 ಕೋಟಿ ವೆಚ್ಚದಲ್ಲಿ ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಕೃಷ್ಣಾವರಂ ಬಳಿ ದೊಡ್ಡ ಸಂಪ್ ಮತ್ತು ಪೈಪ್ಲೈನ್ ನಿರ್ಮಿಸಿ ಡಿ.ಕೆ.ಹಳ್ಳಿ ವ್ಯಾಪ್ತಿಯ 10ಕ್ಕೂ ಹೆಚ್ಚು ವಾರ್ಡ್ಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವುದಷ್ಟೇ ಅಧಿಕಾರಿಗಳ ಕರ್ತವ್ಯವಲ್ಲ; ಅವುಗಳಿಗೆ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸುವ ಜವಾಬ್ದಾರಿಯೂ ಇದೆ. ಸರ್ಕಾರದ ಸೇವೆಗಳು ಜನರ ಮನೆ ಬಾಗಿಲಿಗೆ ತಲುಪುವಂತೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಹೇಳಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸುಜಾತ,ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಆರ್.ಮುನಿರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಡಿಡಿಪಿಐ ಪರ್ವೀನ್ ತಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್, ಅರಣ್ಯ ಇಲಾಖೆಯ ಶ್ರೀಲಕ್ಷ್ಮಿ, ತೋಟಗಾರಿಕೆ ಇಲಾಖೆಯ ಶಿವಕುಮಾರಿ, ಆರೋಗ್ಯ ಇಲಾಖೆಯ ಸುನಿಲ್ ಕುಮಾರ್, ನಗರ ಪೌರಾಯುಕ್ತ ಜಗ್ಗಾರೆಡ್ಡಿ, ಡಿ.ಕೆ.ಹಳ್ಳಿ ಗ್ರಾಪಂ.ಮಾಜಿ ಅಧ್ಯಕ್ಷ ಡಾ.ಲಯನ್ ಜೆ.ಸುರೇಶ್, ಅಕ್ಷರ ದಾಸೋಹ ಇಲಾಖೆಯ ಯುವರಾಜ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭಾಸ್ಕರ್, ಕಾಂಗ್ರೆಸ್ ಮುಖಂಡ ಅಂಬರೀಶ್ ಕರ್ನಾಟಕ ರಕ್ಷಣಾ ವೇದಿಕೆಯ ಮುನಿರಾಜ್ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
