ದೇವನಹಳ್ಳಿ: ವಿದ್ಯಾರ್ಥಿಗಳಲ್ಲಿ ಜ್ಞಾನ, ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಮೂಲಕ ಶಿಕ್ಷಕರು ಸಮಾಜದ ಭವಿಷ್ಯ ರೂಪಿಸುವ ಮಹತ್ವದ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ ಎಂದು ಎಂಎಲ್‌ಸಿ ಪುಟ್ಟಣ್ಣ ಹೇಳಿದರು.
ಅನಂತ ವಿದ್ಯಾನಿಕೇತನ ಶಾಲೆಯ ಆಡಿಟೋರಿಯಂನಲ್ಲಿ ದೇವನಹಳ್ಳಿ ತಾಲ್ಲೂಕು ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ‘ಗುರುವಂದನಾ ಸಮಾರಂಭ–2026’ರಲ್ಲಿ ಎಂಎಲ್‌ಸಿ ಪುಟ್ಟಣ್ಣ ಮಾತನಾಡಿ, ಶಿಕ್ಷಣ ಕ್ಷೇತ್ರ ನಿರಂತರವಾಗಿ ಬದಲಾಗುತ್ತಿದ್ದು, ಹೊಸ ತಂತ್ರಜ್ಞಾನ ಹಾಗೂ ಬೋಧನಾ ವಿಧಾನಗಳಿಗೆ ಶಿಕ್ಷಕರು ಹೊಂದಿಕೊಳ್ಳಬೇಕಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜತೆಗೆ ಅವರಲ್ಲಿ ಮಾನವೀಯ ಮೌಲ್ಯಗಳು, ಶಿಸ್ತು ಹಾಗೂ ಉತ್ತಮ ನಾಗರಿಕ ಗುಣಗಳನ್ನು ಬೆಳೆಸುವುದು ಅಗತ್ಯ. ಈ ನಿಟ್ಟಿನಲ್ಲಿ ಶಿಕ್ಷಕರ ಸೇವೆ ಅತ್ಯಂತ ಪ್ರಮುಖವಾಗಿದೆ. ಶಿಕ್ಷಕರ ಪರಿಶ್ರಮವನ್ನು ಗುರುತಿಸಿ ಗೌರವಿಸುವ ಇಂತಹ ಕಾರ್ಯಕ್ರಮಗಳು ವೃತ್ತಿಯ ಮೇಲಿನ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜು ಉದ್ಘಾಟಿಸಿದರು. ಪಿಎಸ್ಎಂಎ ಅಧ್ಯಕ್ಷ ರಾಮಚಂದ್ರಗೌಡ.ಎಂ. ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ತಾಲೂಕಿನ 22 ಖಾಸಗಿ ಶಾಲೆಗಳ 44 ಶಿಕ್ಷಕರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಅವರ ಕೊಡುಗೆಯನ್ನು ಸ್ಮರಿಸಲಾಯಿತು. ಈ ವೇಳೆ ಎಂಎಲ್ಸಿ ಪುಟ್ಟಣ್ಣ ಹಾಗೂ ಕ್ಯಾಮ್ಸ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರನ್ನು ಅಭಿನಂದಿಸಲಾಯಿತು.
ಕ್ಯಾಮ್ಸ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಒಕ್ಕೂಟದ ಗೌರವಾಧ್ಯಕ್ಷ ಸತೀಶ್, ಉಪಾಧ್ಯಕ್ಷ ತ್ಯಾಗರಾಜು, ಪ್ರಧಾನ ಕಾರ್ಯದರ್ಶಿ ಕೆಂಪೇಗೌಡ ಎ.ವಿ., ಖಜಾಂಚಿ ಸಯದ್ ರಫೀಕ್, ಜಂಟಿ ಕಾರ್ಯದರ್ಶಿ ಸುರೇಶ್, ನಿರ್ದೇಶಕರು, ಖಾಸಗಿ ಶಾಲೆಗಳ ಸಂಸ್ಥಾಪಕರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಸೇರಿದಂತೆ ಶಿಕ್ಷಣ ಕ್ಷೇತ್ರದ ಹಲವು ಗಣ್ಯರು ಉಪಸ್ಥಿತರಿದ್ದರು.
