ಬಳ್ಳಾರಿ, ಸೆ.:ಆಡಳಿತ ಯಂತ್ರವನ್ನು ಮತ್ತಷ್ಟು ಚುರುಕುಗೊಳಿಸುವ ಉದ್ದೇಶದಿಂದ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಅವರು ಗುರುವಾರ ಬೆಳಿಗ್ಗೆ ಬಳ್ಳಾರಿ ತಾಲೂಕು ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ, ಅಧಿಕಾರಿಗಳ ಕಾರ್ಯವೈಖರಿ ಹಾಗೂ ಸಾರ್ವಜನಿಕರ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು.
ಕಚೇರಿಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರನ್ನುದ್ಧೇಶಿಸಿ ಮಾತನಾಡಿದ ಅವರು; ‘ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವರು ಕೆಲಸ ಮಾಡುತ್ತಿಲ್ಲ. ಅಂತಹವರಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ಜನರ ನಡುವೆ ಇದ್ದುಕೊಂಡು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಸರ್ಕಾರ ಜನರ ಮನೆ ಬಾಗಿಲಿಗೆ ಹೋಗಬೇಕು ಎನ್ನುವುದು ಮುಖ್ಯಮಂತ್ರಿಯವರ ಕನಸು. ಚುನಾವಣೆ ಸಂದರ್ಭದಲ್ಲಿ ಯಾವ ರೀತಿ ಜನರ ಮನೆಗಳಿಗೆ ತೆರಳಿ ಜನರನ್ನು ಭೇಟಿ ಮಾಡುತ್ತೇವೆಯೋ, ಅದೇ ರೀತಿಯಲ್ಲಿ ಅಧಿಕಾರಿಗಳು ಜನರ ಬಳಿಗೆ ತೆರಳಿ ಸೇವೆ ನೀಡಬೇಕು ಎಂದು ಹೇಳಿದರು.
ತಾಲೂಕು ಕಚೇರಿಯಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ವಿವಿಧ ಪಿಂಚಣಿಗಳು ವಿಳಂಬವಾಗುತ್ತಿರುವ ಕುರಿತು ದೂರುಗಳು ಬಂದಿದ್ದವು. ಸರ್ವರ್ ಸಮಸ್ಯೆಯೂ ಇದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಈ ಕುರಿತು ಪರಿಶೀಲನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
‘ಇನ್ನು ಮುಂದೆ ಎರಡು ದಿನಕ್ಕೊಮ್ಮೆ ತಾಲೂಕು ಕಚೇರಿಗೆ ಭೇಟಿ ನೀಡುತ್ತೇನೆ. ತಾಲೂಕು ಕಚೇರಿ ಮಾತ್ರವಲ್ಲದೆ ವಿವಿಧ ಸರ್ಕಾರಿ ಕಚೇರಿಗಳಿಗೂ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸುತ್ತೇನೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನರ ಸೇವೆ ಮಾಡಬೇಕು. ಜನರಿಗೆ ತೊಂದರೆ ನೀಡುವ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಂಡು, ಅಮಾನತುಗೊಳಿಸುವುದಕ್ಕೂ ಹಿಂದೆ ಸರಿಯುವುದಿಲ್ಲ’ ಎಂದು ಭರತ್ ರೆಡ್ಡಿ ಎಚ್ಚರಿಕೆ ನೀಡಿದರು.
ಜನಾರ್ದನ ರೆಡ್ಡಿಗೆ ಭರತ್ ರೆಡ್ಡಿ ತಿರುಗೇಟು
ಇದೇ ವೇಳೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಭರತ್ ರೆಡ್ಡಿ, ಭಗವದ್ಗೀತೆಯನ್ನು ಉಲ್ಲೇಖಿಸಿ ತಿರುಗೇಟು ನೀಡಿದರು.
‘ಯಾವುದೇ ಒಂದು ಯುದ್ಧ ಮಾಡಬೇಕಾದರೆ ಅದರ ಬಗ್ಗೆ ಮೊದಲೇ ಮಾತನಾಡಬಾರದು. ಯುದ್ಧದ ನೀತಿ ಬಗ್ಗೆ ಚರ್ಚೆ ಮಾಡಬಾರದು. ರಣರಂಗದಲ್ಲಿ ಯಾರು ರಣಹೇಡಿಗಳು ಎಂಬುದು ಮುಂದೆ ಗೊತ್ತಾಗುತ್ತದೆ’ ಎಂದು ಹೇಳಿದರು.
2028ರ ಚುನಾವಣೆಯೇ ಉತ್ತರ ನೀಡುವ ಸಮಯ. ಜನರೇ ತೀರ್ಮಾನ ಮಾಡುತ್ತಾರೆ. ಜನರೇ ಅವರಿಗೆ ಉತ್ತರ ನೀಡುತ್ತಾರೆ ಎಂದರು.
‘2028ರಲ್ಲಿ ಯುದ್ಧದ ಸಮಯ ಬಂದಾಗ ಉತ್ತರ ಕೊಡುತ್ತೇವೆ. ಜನಾರ್ದನ ರೆಡ್ಡಿ ಅವರಿಗೆ 2028ರಲ್ಲಿ ಜನರೇ ಉತ್ತರ ನೀಡುತ್ತಾರೆ. ಸಾವಿರ ಮಾತುಗಳಿಗೆ ಒಂದೇ ಉತ್ತರ—ಅದು ಜನರ ಬಾಯಿಂದಲೇ ಸಿಗುತ್ತದೆ’ ಎಂದರು.
ಜನರ ಮನಸ್ಸು ಗೆಲ್ಲುವುದೇ ತಮ್ಮ ಗುರಿ. ಜನರು ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ. ಬಳ್ಳಾರಿಯ ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸುತ್ತೇವೆ. ಬೇರೆ ಯಾವುದೇ ವಿಚಾರದ ಬಗ್ಗೆ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದೊಡ್ಡ ಮಟ್ಟದಲ್ಲಿ ವಾಲ್ಮೀಕಿ ಪುತ್ಥಳಿ ಉದ್ಘಾಟನೆ
ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿಯನ್ನು ದೊಡ್ಡ ಮಟ್ಟದಲ್ಲಿ ಉದ್ಘಾಟನೆ ಮಾಡುವುದಾಗಿ ಭರತ್ ರೆಡ್ಡಿ ತಿಳಿಸಿದರು. ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಈ ಕುರಿತು ಮುಹೂರ್ತ ನಿಗದಿಪಡಿಸಲಾಗುವುದು ಎಂದರು.
‘ಬಳ್ಳಾರಿ ಅಭಿವೃದ್ಧಿ ಮಾಡುವುದು ಒಂದೇ ನಮ್ಮ ಗುರಿ. ಇಷ್ಟು ವರ್ಷಗಳಿಂದ ಯಾವುದೇ ನಗರಾಭಿವೃದ್ಧಿ ಆಗಿರಲಿಲ್ಲ. ಇನ್ನು ಮುಂದೆ ನಗರದ ಅಭಿವೃದ್ಧಿ ಹೊಂದಿದ ಬಳ್ಳಾರಿ ನೋಡಲಿದ್ದೀರಿ’ ಎಂದು ಶಾಸಕ ಭರತ್ ರೆಡ್ಡಿ ಹೇಳಿದರು.
