ಕುಮಾರ ಕೃಪ ರಸ್ತೆಯಲ್ಲಿರುವ ಸಿಂಧಿ ಪ್ರೌಢಶಾಲೆಯಲ್ಲಿ ಸಿಂಧಿ ಸೇವಾ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಸಿಂಧಿ ಸೇವಾ ಸಮಿತಿಯು ಶಿಕ್ಷಕರ ಬಗ್ಗೆ ಅಪಾರ ಗೌರವ ಮನೋಭಾವವನ್ನು ಹೊಂದಿದ್ದು ಮಕ್ಕಳ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಶಿಕ್ಷಕರ ಕಾರ್ಯ ವೈಖರಿಗೆ ಬೆನ್ನು ತಟ್ಟುತ್ತಾ ಎಲ್ಲ ಶಿಕ್ಷಕರಿಗೆ ಮಾರ್ಗದರ್ಶನ ನೀಡಿ ಬೆಂಗಳೂರು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ವಿಶೇಷ ಸ್ಥಾನ ಪಡೆದಿದೆ.
ವಿದ್ಯಾಸಂಸ್ಥೆ ಬೆಳೆಯಲು ಕಾರಣರಾದ ಎಲ್ಲ ಶಿಕ್ಷಕರಿಗೆ ಅಭಿಮಾನದ ಕೃತಜ್ಞತೆ ಸಲ್ಲಿಸಲು ಶಿಕ್ಷಕರ ದಿನಾಚರಣೆಯನ್ನು ಹಲವು ವರ್ಷಗಳಿಂದ ನಡೆಸುತ್ತಿರುವ ಸಿಂಧಿ ಸೇವಾ ಸಮಿತಿಯು ಈ ಬಾರಿಯೂ ಸಹ ಬಹಳ ಸಂಭ್ರಮ ಸಡಗರದಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಿತು. ಶಿಕ್ಷಕರ ದಿನಾಚರಣೆಯ ಜವಾಬ್ದಾರಿಯನ್ನು ಪ್ರತಿ ವರ್ಷ ಸಮಿತಿಯ ಶಾಲಾ ಕಾಲೇಜುಗಳ ಒಂದೊಂದು ಸಂಸ್ಥೆ ವಹಿಸಿಕೊಂಡು ಬರುತ್ತಿದ್ದು ಈ ಸಲ ಸಿಂಧಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ನಂದ ಎನ್ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.
ಮುಖ್ಯ ಸಮಾರಂಭದಲ್ಲಿ ಸಿಂಧಿ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಎಫ್ ಮಾಧ್ವಾನಿಯವರು ಮಾತನಾಡಿ ಸಿಂಧಿ ಸೇವಾ ಸಮಿತಿಗೆ ಹಲವು ವರ್ಷಗಳ ಸಮೃದ್ಧ ಇತಿಹಾಸವಿದ್ದು ಹಿರಿಯರ ದಾರಿಯಲ್ಲಿ ಈಗಿನ ಪದಾಧಿಕಾರಿಗಳು ಹೊಸ ಹುರುಪಿನಿಂದ ಒಗ್ಗೂಡಿ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದರು. ಶಿಕ್ಷಕರೇ ನಮ್ಮ ಶಕ್ತಿ; ಶಿಕ್ಷಕರೇ ನಮ್ಮ ಆಸ್ತಿ ಎಂದು ಬಣ್ಣಿಸಿದ ಶ್ರೀಯುತರು ನಮ್ಮ ಶಿಕ್ಷಕರಲ್ಲಿರುವ ಸಹನೆ, ಕರ್ತವ್ಯ ಪ್ರಜ್ಞೆ, ಸೇವಾ ಸ್ಫೂರ್ತಿಯೇ ಸಮಿತಿಯು ಸರ್ವತೋಮುಖವಾಗಿ ಬೆಳೆಯಲು ಕಾರಣವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ತಮ್ಮ ಮಾತಿನ ನಡುವೆ ಈ ಶೈಕ್ಷಣಿಕ ವರ್ಷದಲ್ಲಿ ಸಾಧನೆ ಮಾಡಿದ ಹಲವು ಶಿಕ್ಷಕರನ್ನು ಅಭಿನಂದಿಸಿ ನಿಮ್ಮ ಸಾಧನೆ ಹೀಗೆಯೇ ಮುಂದುವರೆಯಲೆಂದು ಶುಭ ಹಾರೈಸಿದರು.
ಸಿಂಧಿ ವಿದ್ಯಾ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಅತಿ ಹೆಚ್ಚು ವರ್ಷಗಳವರೆಗೆ ಸೇವೆ ಸಲ್ಲಿಸುತ್ತಿರುವ ಹಿರಿಯ ಶಿಕ್ಷಕರಿಗೆ ಸಿಂಧಿ ಸೇವಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಕುಮಾರ ಕೃಪ ರಸ್ತೆಯಲ್ಲಿರುವ ಸಿಂಧಿ ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅಲ್ಪನಕಲಾ, ಹೆಬ್ಬಾಳದ ಸಿಂಧಿ ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ರಚನಾ ಶರ್ಮ ಹಾಗೂ ಸಿಂಧಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಆಶಾ ಮುಂದಾಳತ್ವದಲ್ಲಿ ಕ್ರಮವಾಗಿ ಆಯಾ ಶಾಲಾ ಕಾಲೇಜುಗಳಲ್ಲಿ ಹೆಚ್ಚು ವರ್ಷಗಳವರೆಗೆ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ನೀಡಿ ಸಂಸ್ಥೆಯ ಅಧ್ಯಕ್ಷರು ಗೌರವ ನೀಡಿದರು.
ಸಮಾರಂಭದ ನಡುವೆ ಸೇವಾ ಸಮಿತಿಯ ಹಿನ್ನೆಲೆ, ವಿಶೇಷ ಸಾಧನೆ, ಸದಸ್ಯರ ನೈಪುಣ್ಯತೆಗೆ ಸಂಬಂಧಿಸಿದಂತೆ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಯಿತು. ರಸಪ್ರಶ್ನೆ ಕಾರ್ಯಕ್ರಮದ ನಡುವೆ ಕುಮಾರ ಕೃಪ ರಸ್ತೆಯಲ್ಲಿರುವ ಸಿಂಧಿ ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅಲ್ಪನಕಲಾ ಅವರು ಹೆಬ್ಬಾಳದ ಸಿಂಧಿ ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ರಚನಾ ಶರ್ಮ ಅವರು, ಹಾಗೂ ಸಿಂಧಿ ಪದವಿ ಕಾಲೇಜಿನ ಡಾ.ಆಶಾ ಅವರು, ಸಿಂಧಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ ನಂದ ಎನ್ ಅವರು, ಸಿಂಧಿ ಸ್ನಾತಕೋತ್ತರ ಕೇಂದ್ರದ ಡಾ. ಎನ್. ಸಂಧ್ಯಾ ಅವರು ಹಾಗೂ ಸಿಂಧಿ ಸೇವಾ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ನಿರ್ಮಲಾ ಅವರು ತಮ್ಮ ತಮ್ಮ ಸಂಸ್ಥೆಯ ವೈಶಿಷ್ಟ್ಯವನ್ನು ಸಭೆಗೆ ಪರಿಚಯಿಸಿದರು.
ಸಮಾರಂಭದ ಆರಂಭದಲ್ಲಿ ಸಿಂಧಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ವತಿಯಿಂದ ಹಲವು ಮನೋರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹಾಗೆಯೇ ಕುಮಾರ ಕೃಪ ರಸ್ತೆಯಲ್ಲಿರುವ ಪ್ರೌಢಶಾಲೆಯ ಶಿಕ್ಷಕರು ನೃತ್ಯ ಪ್ರದರ್ಶನ ನೀಡಿದರು. ಹೆಬ್ಬಾಳದ ಸಿಂಧಿ ಪ್ರೌಢಶಾಲೆಯ ಶಿಕ್ಷಕರು ಪ್ರಾರ್ಥನೆ ಸಲ್ಲಿಸಿದರು.
ಸಿಂಧಿ ಸೇವಾ ಸಮಿತಿಯ ಎಲ್ಲ ಪದಾಧಿಕಾರಿಗಳು ಹಾಗೂ ಸಿಂಧಿ ವಿದ್ಯಾ ಸಂಸ್ಥೆಯ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯ ಎಲ್ಲ ಅಧ್ಯಕ್ಷರು, ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಏಕತ್ವ ಎಂಬ ಘೋಷವಾಕ್ಯದೊಂದಿಗೆ ನಡೆದ ಈ ಸಮಾರಂಭದಲ್ಲಿ ಕಾರ್ಯಕ್ರಮದ ನಿರೂಪಣೆ, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಅಭೂತಪೂರ್ವ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದ ಸಿಂಧಿ ಪದವಿಪೂರ್ವ ಕಾಲೇಜಿನ ಎಲ್ಲ ಉಪನ್ಯಾಸಕರ ವರ್ಗದವರು ಈ ಅವಕಾಶ ನೀಡಿ ಕರಸೇವಕರಂತೆ ಸಹಕರಿಸಿ ಒಗ್ಗಟ್ಟಿನಲ್ಲಿ ಗೌರವ ನೀಡಿದ ಸಿಂಧಿ ಸೇವಾ ಸಮಿತಿಯ ಎಲ್ಲ ಪದಾಧಿಕಾರಿಗಳಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ. ಸಮಾರಂಭವು ಸುಗಮವಾಗಿ ನೆರವೇರಲು ಮಾರ್ಗದರ್ಶನ ನೀಡಿ ಬೆಂಬಲಿಸಿದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅಶೋಕ್ ಪಿ ನಾರಂಗ್ ಹಾಗೂ ಎಲ್ಲ ಸದಸ್ಯರಿಗೆ ಪ್ರಾಂಶುಪಾಲರಾದ ನಂದ ಎನ್ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
