ಚಿಕ್ಕಬಳ್ಳಾಪುರ: ನಗರದಲ್ಲಿ ಹಲವು ಸಮಾಜಮುಖಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಒಕ್ಕಲಿಗರ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ಅವರ ನೇತೃತ್ವದಲ್ಲಿ
ಸಮಾನ ಮನಸ್ಕರ ಸೇವಾ ಸಂಸ್ಥ ವತಿಯಿಂದ 12ನೇ ವರ್ಷದ ಸಾಮೂಹಿಕ ಸೀಮಂತ ಹಾಗೂ ಗರ್ಭಿಣಿಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಭಾನುವಾರ ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿ ಶ್ರೀ ಮಂಗಳನಾಥ ಸ್ವಾಮೀಜಿ ಗರ್ಭಿಣಿಯರನ್ನು ಕುಟುಂಬ ಹಾಗೂ ಸಮಾಜ ಗೌರವದಿಂದ ನೋಡಿಕೊಳ್ಳಬೇಕು ಆರೋಗ್ಯವಂತ ತಾಯಿಯಿಂದ ಮಾತ್ರ ಆರೋಗ್ಯವಂತ ಸಂತತಿ ಸಾಧ್ಯ ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಗರ್ಭಿಣಿಯರು ದೇವತಾರಾಧನೆ ಹಾಗೂ ಸಾತ್ವಿಕ ಚಿಂತನೆಗಳಲ್ಲಿ ತೊಡಗುವುದರಿಂದ ಉತ್ತಮ ಸಂತಾನವನ್ನು ಪಡೆಯಲು ಸಾಧ್ಯ ಎಂಬ ನಂಬಿಕೆಯಿದೆ.ವಂಶೋದ್ಧಾರಕರನ್ನು ನೀಡುವ ಗರ್ಭಿಣಿಯರನ್ನು ಕುಟುಂಬದವರು ಹಾಗೂ ಸಮಾಜ ಆದರದಿಂದ ಕಾಪಾಡುವ ಹೊಣೆಗಾರಿಕೆ ಹೊಂದಬೇಕು.ಅತ್ತೆ-ಮಾವಂದಿರು,ತಂದೆ-ತಾಯಿ ಹಾಗೂ ಬಂಧುಗಳು ಗರ್ಭಿಣಿಯರನ್ನು ಗೌರವದಿಂದ ನಡೆಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಕಳೆದ 12 ವರ್ಷಗಳಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಗರ್ಭಿಣಿಯರನ್ನು ಒಂದೇ ವೇದಿಕೆಗೆ ಆಹ್ವಾನಿಸಿ, ಜಾತಿ-ಧರ್ಮದ ಭೇದವಿಲ್ಲದೆ ಉಚಿತ ಆರೋಗ್ಯ ತಪಾಸಣೆ ನಡೆಸುವುದರ ಜೊತೆಗೆ ಸಾಮೂಹಿಕ ಸೀಮಂತದ ಮೂಲಕ ತಾಯಿ ಮನೆಯ ಪ್ರೀತಿಯನ್ನು ನೀಡುತ್ತಿರುವುದು ಶ್ಲಾಘನೀಯ.ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಮುಂದಾಗಬೇಕು. ಯಲುವಹಳ್ಳಿ ರಮೇಶ್ ಅವರು ಹಾಕಿಕೊಟ್ಟಿರುವ ಈ ಸೇವಾ ಮಾರ್ಗವನ್ನು ಅವರ ಕುಟುಂಬದವರು ಮುಂದುವರಿಸಿಕೊಂಡು ಹೋಗಲಿ ಎಂದು ಆಶಿಸಿದರು.
ಯಲುವಹಳ್ಳಿ ಎನ್. ರಮೇಶ್ ಮಾತನಾದಿ, ಮನುಷ್ಯ ಈ ಜಗತ್ತಿಗೆ ಬರುವಾಗ ಬರಿಗೈಯಲ್ಲಿ ಬರುತ್ತಾನೆ, ಹೋಗುವಾಗಲೂ ಬರಿಗೈಯಲ್ಲೇ ಹೋಗುತ್ತಾನೆ. ಹೀಗಾಗಿ ತಾವು ದುಡಿದ ಹಣದ ಒಂದಿಷ್ಟು ಭಾಗವನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂಬುದು ನನ್ನ ಅಭಿಪ್ರಾಯ ಇದರ ಭಾಗವಾಗಿ ಕಳೆದ ಹಲವು ವರ್ಷಗಳಿಂದ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, 2015ರಲ್ಲಿ ತಮ್ಮ ಸೊಸೆ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಗರ್ಭಿಣಿಯರಿಗೂ ಸಾಮೂಹಿಕ ಸೀಮಂತ ಕಾರ್ಯಕ್ರಮ ನಡೆಸಬೇಕು ಎಂಬ ಆಲೋಚನೆ ಮೂಡಿತು.ಈ ವಿಚಾರವನ್ನು ಸೊಸೆಯೊಂದಿಗೆ ಚರ್ಚಿಸಿದಾಗ ಅವರು ಸಂತೋಷದಿಂದ ಒಪ್ಪಿಕೊಂಡರು ಅಂದಿನಿಂದ ಪ್ರತಿವರ್ಷ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.ಇದುವರೆಗೆ ಸುಮಾರು 2,000 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ನೆರವೇರಿಸಲಾಗಿದೆ.ಪ್ರತಿವರ್ಷ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳುವ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಹಿಂದೂ ಮಹಿಳೆಯರೊಂದಿಗೆ ಇತರ ಧರ್ಮಗಳ ಗರ್ಭಿಣಿಯರೂ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.
ಕೆಂಪೇಗೌಡ ಆಸ್ಪತ್ರೆಯ ನುರಿತ ಪ್ರಸೂತಿ ತಜ್ಞರ ತಂಡದಿಂದ ಗರ್ಭಿಣಿಯರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ,ವೈದ್ಯಕೀಯ ಸಲಹೆಗಳನ್ನು ನೀಡಲಾಯಿತು.350ಕ್ಕೂ ಹೆಚ್ಚು ಗರ್ಭಿಣಿಯರು ಶಿಬಿರದ ಪ್ರಯೋಜನ ಪಡೆದುಕೊಂಡರು.ಇದೇ ವೇಳೆ ಆಹಾರ ತಜ್ಞರು ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಕ್ರಮ ಹಾಗೂ ಅಗತ್ಯ ವ್ಯಾಯಾಮದ ಕುರಿತು ಸಲಹೆ ನೀಡಿದರು.
ಆರೋಗ್ಯ ತಪಾಸಣೆಯ ಬಳಿಕ ಶಾಸ್ತ್ರೋಕ್ತವಾಗಿ ಸಾಮೂಹಿಕ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು.ಭಾಗವಹಿಸಿದ್ದ ಎಲ್ಲ ಗರ್ಭಿಣಿಯರಿಗೆ ಉಚಿತ ಸೀರೆ,ಕುಪ್ಪಸ,ಅರಿಶಿನ, ಕುಂಕುಮ,ಹಸಿರು ಬಳೆ,ಹಣ್ಣು ಮತ್ತು ಸಿಹಿತಿಂಡಿಗಳನ್ನು ನೀಡಿ ಮಡಿಲು ತುಂಬಿಸಲಾಯಿತು.ಈ ಸಂದರ್ಭದಲ್ಲಿ ಯುವ ಮುಖಂಡ ಯಲುವಹಳ್ಳಿ ಜನಾರ್ದನ್,ಹೇಮಲತಾ ಜನಾರ್ದನ್ ,ಕೆ.ವಿ.ಚಂದ್ರಣ್ಣ,ಕಳವಾರ
ಶ್ರೀಧರ್,ಲಕ್ಷ್ಮಣ್,ನಂದನ್,ರಾಮಚಂದ್ರಾರೆಡ್ಡಿ,ಬೀಡಗಾನಹಳ್ಳಿ ಕೃಷ್ಣಪ್ಪ, ರಾಮಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಯಲುವಹಳ್ಳಿ ರಮೇಶ್ ಸಂಸ್ಥೆಯಿಂದ 350 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ: ಉಚಿತ ಆರೋಗ್ಯ ತಪಾಸಣೆ
