ಚೊಕ್ಕನಹಳ್ಳಿ ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಪದವಿಪೂರ್ವ ಕಾಲೇಜಿನಲ್ಲಿ ಮಾದಕ ದ್ರವ್ಯ ನಿಷೇಧದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ ನಂದ ಎನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಜೊತೆಗೆ ಭವ್ಯ ಭಾರತದ ಉತ್ತಮ ಪ್ರಜೆಯಾಗಬೇಕು; ಹಾಗಾಗಿ ಮಾದಕ ದ್ರವ್ಯಗಳನ್ನು ತಿರಸ್ಕರಿಸಿ ಆರೋಗ್ಯವಂತ ನೆಮ್ಮದಿಯ ವ್ಯಕ್ತಿತ್ವ ರೂಪಿಸಿಕೊಳ್ಳಲು ದೃಢ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು.

ಈ ನಿಟ್ಟಿನಲ್ಲಿ ಇವತ್ತು ಕೊತನೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಮಲ್ಲಪ್ಪ ಅವರು ನಿಮಗೆ ಮಾದಕ ದ್ರವ್ಯ ನಿಷೇಧದ ಬಗ್ಗೆ ಹಾಗೂ ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಲಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಅವರ ಮಾತನ್ನು ಸರಿಯಾಗಿ ಆಲಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪಣತೊಡಬೇಕೆಂದು ತಿಳಿಸಿದರು.

ಕೊತ್ತನೂರು ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀ ಮಲ್ಲಪ್ಪ ಅವರು ಮಾತನಾಡಿ ಸಿಂಧಿ ಪದವಿಪೂರ್ವ ಕಾಲೇಜು ಉತ್ತಮ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಚೆನ್ನಾಗಿ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಉತ್ತಮ ಸಾಧನೆಯಲ್ಲಿ ತೊಡಗಿಕೊಳ್ಳಬೇಕು. ಪ್ರತಿ ಶಾಲಾ ಕಾಲೇಜುಗಳ ಹೊರಗೆ ಅಕ್ಕಪಕ್ಕದ ಸ್ಥಳಗಳಲ್ಲಿ ಪೊಲೀಸ್ ಕಣ್ಗಾವಲು ಇರಲಿದೆ. ಯಾವುದೇ ವಿದ್ಯಾರ್ಥಿ ನಿಯಮಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಅವರು ಕಿವಿಮಾತು ಹೇಳಿದರು.
ಹಾಗೆಯೇ ಅದೇ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಅಫ್ಸರ್ ಅಲಿ ಅವರು ಸಾಮಾಜಿಕ ಜಾಲದ ಸುರಕ್ಷಿತ ಬಳಕೆ ಹಾಗೂ ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಿದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಅನಂತ ಅವರು ಕಾರ್ಯಕ್ರಮ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿಯರಾದ ರಚನಾ ಗುಲಾಟಿ ಅವರು ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾಲೇಜು ಆಡಳಿತ ಮಂಡಳಿಯವರು ಈ ಮಾದಕ ದ್ರವ್ಯ ನಿಷೇಧದ ಅರಿವು ಕಾರ್ಯಕ್ರಮ ನಡೆಯುತ್ತಿರುವುದು ಬಹಳ ಉತ್ತಮ ಎಂಬ ಸಂದೇಶವನ್ನು ನೀಡಿದ್ದಾರೆ. ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು

