Skip to content
Monday, 5 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಜೀವನದ ಅಮೂಲ್ಯ ಕ್ಷಣಗಳನ್ನು ಶಾಶ್ವತವಾಗಿ ಉಳಿಸುವ ಮಹತ್ವದ ವೃತ್ತಿಯಾಗಿದೆ.

Share

ಬಂಗಾರಪೇಟೆ: ಛಾಯಾಗ್ರಹಣ ಅತ್ಯುನ್ನತ ಕಲೆಯಾಗಿದ್ದು, ಜೀವನದ ಅಮೂಲ್ಯ ಕ್ಷಣಗಳನ್ನು ಶಾಶ್ವತವಾಗಿ ಉಳಿಸುವ ಮಹತ್ವದ ವೃತ್ತಿಯಾಗಿದೆ. ಛಾಯಾಗ್ರಾಹಕರು ವೃತ್ತಿಯ ಗೌರವದೊಂದಿಗೆ ಸಂಘಟನೆಯ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸಬೇಕು ಎಂದು ಕೋಲಾರ ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಕೃಷ್ಣ ಕರೆ ನೀಡಿದರು.

ಬಂಗಾರಪೇಟೆ ತಾಲೂಕು ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್‌ಗಳ ಸಂಘದ ವತಿಯಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಛಾಯಾಗ್ರಾಹಕರಿಗಾಗಿ ಸ್ವಂತ ಛಾಯಾ ಭವನ ನಿರ್ಮಾಣವಾಗಿರುವುದು ಹೆಮ್ಮೆಯ ಸಂಗತಿ. ಭವನ ನಿರ್ಮಾಣಕ್ಕೆ ಶ್ರಮಿಸಿದ ಹಿರಿಯ ಛಾಯಾಗ್ರಾಹಕರು ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಂಘದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅವುಗಳನ್ನು ವೈಯಕ್ತಿಕವಾಗಿ ಚರ್ಚಿಸಿ ಬಗೆಹರಿಸಿಕೊಂಡು ಸಂಘಟನೆಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಹೇಳಿದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸಮೂರ್ತಿ ಮಾತನಾಡಿ, VHS, ಮ್ಯಾನುಯಲ್ ಕ್ಯಾಮೆರಾ ಕಾಲದಿಂದ ಇಂದಿನ ಡಿಜಿಟಲ್ ಯುಗದವರೆಗೆ ಛಾಯಾಗ್ರಹಣ ಕ್ಷೇತ್ರ ಸಾಕಷ್ಟು ಬದಲಾವಣೆಯಾಗಿದೆ. ತಂತ್ರಜ್ಞಾನಕ್ಕೆ ತಕ್ಕಂತೆ ಛಾಯಾಗ್ರಾಹಕರು ತಮ್ಮ ಕೌಶಲ್ಯವನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.

ಗೌರವಾಧ್ಯಕ್ಷ ಆರೋಕ್ಯ ರಾಜನ್ ಮಾತನಾಡಿ, ಛಾಯಾಗ್ರಹಣವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಪ್ರತಿಯೊಬ್ಬರೂ ತಮ್ಮ ವೃತ್ತಿಗೆ ಗೌರವ ನೀಡಬೇಕು. ಸಂಘದ ಕಾರ್ಯಕ್ರಮಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಬೇಕು ಎಂದು ಕರೆ ನೀಡಿದರು.

ಮಾಲೂರು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಡಿಜಿಟಲ್ ಯುಗದಲ್ಲಿ ಗ್ರಾಹಕರ ನಿರೀಕ್ಷೆಗಳು ಹೆಚ್ಚಾಗಿದ್ದು, ಛಾಯಾಗ್ರಾಹಕರು ಹೊಸ ತಂತ್ರಜ್ಞಾನಕ್ಕೆ ನಿರಂತರವಾಗಿ ಅಪ್‌ಡೇಟ್ ಆಗಬೇಕು. ಕಾರ್ಯಕ್ರಮಗಳಿಗೆ ತೆರಳುವಾಗ ವೃತ್ತಿಪರ ಉಡುಪು ಹಾಗೂ ನಡವಳಿಕೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನಾಗೇಶ್ ಆಚಾರ್ ಮಾತನಾಡಿ, ಬಂಗಾರಪೇಟೆಯ ಛಾಯಾ ಭವನವು ಛಾಯಾಗ್ರಾಹಕರ ಶಕ್ತಿ ಕೇಂದ್ರವಾಗಬೇಕು. ಇಲ್ಲಿ ತರಬೇತಿ ಶಿಬಿರಗಳು ಹಾಗೂ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಭವನವನ್ನು ಸದಾ ಸಕ್ರಿಯವಾಗಿಡಬೇಕು ಎಂದರು.

ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿ, ಛಾಯಾಗ್ರಾಹಕರೂ ಸೇರಿದಂತೆ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ತಾಲೂಕಿನಲ್ಲಿ ಸುಮಾರು 320 ಎಕರೆ ಜಾಗ ಗುರುತಿಸಲಾಗಿದ್ದು, ಮುಂದಿನ ಆರು ತಿಂಗಳಲ್ಲಿ 10 ಸಾವಿರ ಅರ್ಹ ಫಲಾನುಭವಿಗಳಿಗೆ 30×40 ಅಳತೆಯ ನಿವೇಶನಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ನಿವೇಶನ ಪ್ರದೇಶಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಛಾಯಾಗ್ರಾಹಕರಿಗೂ ಅರ್ಹತೆಯ ಆಧಾರದ ಮೇಲೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರ ಸ್ವಯಂಪ್ರೇರಿತ ರಕ್ತದಾನ, ಸಸಿ ನೆಡುವಿಕೆ, ಗುರುತಿನ ಚೀಟಿ ಹಾಗೂ ಆಸರೆ ಯೋಜನೆಯ ಪ್ರಮಾಣ ಪತ್ರ ವಿತರಣೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ಬಂಗಾರಪೇಟೆ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಶ್ರೀರಾಮ್, ಕಾರ್ಯದರ್ಶಿ ನವೀನ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು

Written by

Bayalu Simha

Leave a Reply

Your email address will not be published. Required fields are marked *