ಚಿಕ್ಕಬಳ್ಳಾಪುರ:ಸಮಾಜ ಸದ ಆರೋಗ್ಯ, ಪೌಷ್ಟಿಕತೆ ಹಾಗೂ ಮಕ್ಕಳ ಆರೈಕೆಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು ಹಾಗೂ ಅಕ್ಷರ ದಾಸೋಹ ಮತ್ತು ಅಡುಗೆ ಸಹಾಯಕಿಯರ ಸೇವೆಯನ್ನು ಗುರುತಿಸಿ ಅವರನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ಭಾನುವಾರ ಶಿಡ್ಲಘಟ್ಟ ಹೂರವಲಯದ ಹಂಡಿಗನಾಳ ಕೆ. ವಿ.ಭವನದಲ್ಲಿ ಗೌರಿ-ಗಣೇಶ ಹಬ್ಬದ ಅಂಗವಾಗಿ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು,ಅಕ್ಷರ ದಾಸೋಹ ಹಾಗೂ ಅಡುಗೆ ಸಹಾಯಕಿಯರಿಗೆ ಆಯೋಜಿಸಿದ್ದ ಸೇವಾ ಸೌಭಾಗ್ಯ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಜನರ ಆರೋಗ್ಯ, ಮಕ್ಕಳ ಆರೈಕೆ,ಪೌಷ್ಟಿಕತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಅವರ ಸೇವೆಯನ್ನು ಗುರುತಿಸಿ ಗೌರವಿಸುವ ಮೂಲಕ ಅವರಲ್ಲಿ ಮತ್ತಷ್ಟು ಉತ್ಸಾಹ ಮತ್ತು ಆತ್ಮವಿಶ್ವಾಸ ಮೂಡಿಸುವ ಕೆಲಸವಾಗಬೇಕು.ಶಿಡ್ಲಘಟ್ಟದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮ ರಾಜ್ಯಕ್ಕೆ ಉತ್ತಮ ಸಂದೇಶ ನೀಡಲಿದೆ ಇಂತಹ ಕಾರ್ಯಕ್ರಮಗಳು ಇತರೆ ಪ್ರದೇಶಗಳಲ್ಲಿಯೂ ನಡೆಯಬೇಕು ಎಂದು ತಿಳಿಸಿದರು.
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ನಿರಂತರವಾಗಿ ಧರಣಿ,ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿರುವುದು ಕಂಡಿದ್ದೇವೆ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ತಾವು ಸದಾ ಧ್ವನಿಯಾಗಿರುವುದಾಗಿ ತಿಳಿಸಿದ ಶಾಸಕ ರವಿ ಕುಮಾರ್ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿದ್ದರು ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಅಡುಗೆ ಸಹಾಯಕಿಯರ ನ್ಯಾಯಯುತ ಬೇಡಿಕೆಗಳು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಶಾಸಕ ಬಿ.ಎನ್.ರವಿಕುಮಾರ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಗನ ಸಿಂಧು,ತಾಲ್ಲೂಕು ಪಂಚಾಯಿತಿ ಆಡಳಿತ ಅಧಿಕಾರಿ ಹೇಮಾವತಿ, ಚೀಮುಲ್ ನಿರ್ದೇಶಕರಾದ ರಾಮಣ್ಣ,ಮುನಿಯಪ್ಪ,ಕೃಷ್ಣ ರೆಡ್ಡಿ,ಆವಲಪ್ಪ,ಹಾಗೂ ತಾದೂರು ರಘು,ಉಮೇಶ್, ಸಿ.ಕೆ. ಗಜೇಂದ್ರ ಬಾಬು,ಮೇಲೂರು ಮಂಜುನಾಥ್, ಶ್ರೀನಿವಾಸ್,
ವಿಜಯೇಂದ್ರ,ಲಕ್ಷ್ಮೀನಾರಾಯಣ ರೆಡ್ಡಿ, ಶ್ರೀರಾಮ ರೆಡ್ಡಿ,ವಿಜಯ್ ಕುಮಾರ್,ರಮೇಶ್,ನಂದ ಕಿಶನ್,ಅನಿಲ್ ಕುಮಾರ್,ರೂಪನವೀನ್,ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು,ಅಕ್ಷರ ದಾಸೋಹ ಹಾಗೂ ಅಡುಗೆ ಸಹಾಯಕಿಯರು ಸೇರಿದಂತೆ ಹಲವರು ಭಾಗವಹಿಸಿದ್ದರು.( ಮುಬಷೀರ್ ಅಹಮದ್ )
