Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಐಸಿಎಆರ್-ನಿವೇದಿ ವತಿಯಿಂದ VIBCON-2026 ಅಂತಾರಾಷ್ಟ್ರೀಯ ಸಮ್ಮೇಳನ

Share

ಯಲಹಂಕ : ಜಾನುವಾರು ಕ್ಷೇತ್ರ ಎದುರಿಸುತ್ತಿರುವ ಸವಾಲು ಗಳನ್ನು ಪರಿಹರಿಸಲು ಕೃತಕ ಬುದ್ಧಿಮತ್ತೆ, ಯಂತ್ರಕಲಿಕೆ ಯಂತಹ ಸುಧಾರಿತ ತಂತ್ರಜ್ಞಾನಗಳನ್ನು ಶೈಕ್ಷಣಿಕ ಪಠ್ಯಕ್ರಮ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ಹೆಚ್ಚು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಐಸಿಎಆರ್‌ ನ ಉಪ ಮಹಾನಿರ್ದೇಶಕ (ಶಿಕ್ಷಣ) ಡಾ.ಯಶಪಾಲ್ ಸಿಂಗ್ ಮಲ್ಲಿಕ್ ಸಲಹೆ ನೀಡಿದರು

.ಯಲಹಂಕ ಕ್ಷೇತ್ರದ ರಾಮಗೊಂಡನಹಳ್ಳಿ ಸಮೀಪ ಇರುವ ಐಸಿಎಆರ್-ನಿವೇದಿ (ರಾಷ್ಟ್ರೀಯ ಪಶುರೋಗ ಸಾಂಕ್ರಾಮಿಕ ಶಾಸ್ತ್ರ ಮತ್ತು ರೋಗ ಮಾಹಿತಿ ಸಂಸ್ಥೆ) ಸಂಸ್ಥೆ ವತಿಯಿಂದ ಸೆ.23ರಿಂದ 25ರವರೆಗೆ ಆಯೋಜಿಸಿರುವ VIBCON-2026 ಮೂರು ದಿನಗಳ ಅಂತಾ ರಾಷ್ಟ್ರೀಯ ಸಮ್ಮೇಳನ ಮತ್ತು ಜೈವಿಕ ತಂತ್ರಜ್ಞಾನ ಸೊಸೈಟಿಯ 31ನೇ ವಾರ್ಷಿಕ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಕೃತಕ ಬುದ್ಧಿಮತ್ತೆ, ಯಂತ್ರಕಲಿಕೆ, ಜೈವಿಕ ತಂತ್ರಜ್ಞಾನಗಳಂತಹ ಅತ್ಯಾಧುನಿಕ ಸುಧಾರಿತ ತಂತ್ರಜ್ಞಾನಗಳನ್ನು ಅಧ್ಯಯನ ವಿಷಯ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ಹೆಚ್ಚು ಅಳವಡಿಸುವುದರಿಂದ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಾಗತಿಕ ಮಟ್ಟದಲ್ಲಿ ಮುನ್ನುಗ್ಗಲು ಸಾದ್ಯವಾಗುತ್ತದೆ, ಈ ದಿಸೆಯಲ್ಲಿ ಐಸಿಎಆರ್‌ನ ಶಿಕ್ಷಣ ವಿಭಾಗ ಕೈಗೊಂಡಿರುವ ಪ್ರಮುಖ ಉಪಕ್ರಮಗಳು ಆಶಾದಾಯಕವಾಗಿವೆ ಎಂದರು.

ಐಸಿಎಆರ್-ನಿವೇದಿ ಸಂಸ್ಥೆಯ ನಿರ್ದೇಶಕರು, VIBCON-2026 ಅಂತಾರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷರಾದ ಡಾ.ಬಿ.ಆರ್. ಗುಲಾಟಿ ಅವರು ಮಾತನಾಡಿ ‘ಜೈವಿಕ ತಂತ್ರಜ್ಞಾನ ಮತ್ತು ರೋಗ ಮಾಹಿತಿಯ ಮೂಲಕ ಪಶು ಆರೋಗ್ಯ ಮತ್ತು ಉತ್ಪಾದನೆಯನ್ನು ಸುಧಾರಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ವಿಜ್ಞಾನಿಗಳು, ನೀತಿ ನಿರೂಪಕರು ಮತ್ತು ಉದ್ಯಮ ಪ್ರತಿನಿಧಿಗಳನ್ನು ಈ ಸಮ್ಮೇಳನವು ಒಂದೇ ವೇದಿಕೆಯಡಿ ಒಗ್ಗೂಡಿಸಿದೆ. ಪಶು ಆರೋಗ್ಯ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳು ವಿವಿಧ ವೈಜ್ಞಾನಿಕ ಅಧಿವೇಶನಗಳಲ್ಲಿನ ಪ್ರಮುಖ ಉಪನ್ಯಾಸಗಳು ಹಾಗೂ ವೈಜ್ಞಾನಿಕ ಚರ್ಚೆಗಳಿಂದ ಉತ್ತಮ ಪ್ರೇರಣೆ ಪಡೆಯಬೇಕೆಂದು ಕರೆ ನೀಡಿದರು.

ಸಮ್ಮೇಳನದಲ್ಲಿ ಐ.ಎಸ್.ವಿ.ಐ.ಬಿ. ಕಾರ್ಯದರ್ಶಿ ಡಾ.ಎಸ್.ಮನೋಹರನ್, ಪಂಜಾಬ್ ನ ಲುಧಿಯಾನದ ಗಡ್ವಾಸು ವಿಶ್ವವಿದ್ಯಾಲಯದ ಕುಲಪತಿ ಡಾ.ಜತೀಂದರ್ ಪಾಲ್ ಸಿಂಗ್ ಗಿಲ್, ಮಧ್ಯಪ್ರದೇಶದ ಜಬಲ್‌ಪುರ ಎನ್.ಡಿ.ವಿ.ಎಸ್. ವಿಶ್ವವಿದ್ಯಾಲಯದ ಕುಲಪತಿ ಡಾ.ಮಂದೀಪ್ ಶರ್ಮ, ಅಮೆರಿಕದ ಪೆನ್ ಸ್ಟೇಟ್ ವಿಶ್ವವಿದ್ಯಾಲಯದ ಡಾ.ವಿವೇಕ್ ಕಪೂರ್, ಮಿನೆಸೋಟಾ ವಿಶ್ವವಿದ್ಯಾಲಯದ ಡಾ.ಸಾಗರ್ ಗೋಯಲ್, ದಕ್ಷಿಣ ಫ್ಲೋರಿಡಾ ವಿಶ್ವವಿದ್ಯಾಲಯದ ಡಾ.ಪಾಲಿ ರಾಯ್, ಇಂಗ್ಲೆಂಡ್ ನ ರಾಯಲ್ ಸ್ಕೂಲ್ ಆಫ್ ವೆಟರಿನರಿ ಸ್ಟಡೀಸ್‌ನ ಪಶು ಆರೋಗ್ಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜೊನಾಥನ್, ರಷ್ಟನ್ ಮತ್ತು ಆಸ್ಟ್ರೇಲಿಯಾದ ಸಿ.ಎಸ್.ಐ.ಆರ್.ಓ ದ ಹಿರಿಯ ಸಂಶೋಧನಾ ವಿಜ್ಞಾನಿ ಡಾ. ನಾಗೇಂದ್ರ ಸಿಂಗನಲ್ಲೂರ್, VIBCON-2026 ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ವಿ.ಬಾಲಮುರುಗನ್, ಸಹ ಸಂಘಟನಾ ಕಾರ್ಯದರ್ಶಿ ಡಾ.ಝಡ್.ಬಿ.ದುಬಾಲ್ ಸೇರಿದಂತೆ ಭಾರತದ ವಿವಿಧ ಭಾಗಗಳಿಂದ ಆಗಮಿಸಿದ್ದ 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ಬಾಕ್ಸ್ :
ಸಮ್ಮೇಳನದಲ್ಲಿ ಚರ್ಚಿಸಲಿರುವ ವಿವಿಧ ವಿಷಯಗಳು :

ಸಮ್ಮೇಳನದಲ್ಲಿ “ಸ್ಮಾರ್ಟ್ ಜೈವಿಕ ತಂತ್ರಜ್ಞಾನ ಆವಿಷ್ಕಾರಗಳು ಮತ್ತು ರೋಗ ಮಾಹಿತಿಯ ಮೂಲಕ ಪಶು ಆರೋಗ್ಯ ಹಾಗೂ ಉತ್ಪಾದನಾ ವ್ಯವಸ್ಥೆಗಳ ಪರಿವರ್ತನೆ” ಎಂಬ ಕೇಂದ್ರ ವಿಷಯದಡಿ ಒಟ್ಟು 10 ವೈಜ್ಞಾನಿಕ ಅಧಿವೇಶನಗಳು ಮತ್ತು ಎರಡು ವಿಶೇಷ ಅಧಿವೇಶನಗಳನ್ನು ಆಯೋಜಿಸಲಾಗಿದ್ದು, ಸಂಶೋಧಕರು, ಶಿಕ್ಷಣ ತಜ್ಞರು, ಪಶು ವೈದ್ಯಕೀಯ ಮತ್ತು ಪಶು ವಿಜ್ಞಾನ ವೃತ್ತಿಪರರು, ಜೈವಿಕ ತಂತ್ರಜ್ಞಾನ ತಜ್ಞರು, ಉದ್ಯಮ ಪ್ರತಿನಿಧಿಗಳು, ನೀತಿ ನಿರೂಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳು ಭಾಗವಹಿಸಿದ್ದು, ಉದಯೋನ್ಮುಖ ತಂತ್ರಜ್ಞಾನಗಳು, ಪಶು ರೋಗಗಳ ರೋಗನಿರ್ಣಯ ಮತ್ತು ತಡೆಗಟ್ಟುವಿಕೆ ಇವುಗಳು ಜಾನುವಾರು ಉತ್ಪಾದನಾ ವ್ಯವಸ್ಥೆಗಳನ್ನು ಹೇಗೆ ಬಲಪಡಿಸುತ್ತಿವೆ ಎಂಬುದರ ಕುರಿತು ಚರ್ಚೆ, ಪಶುವೈದ್ಯಕೀಯ ಜೈವಿಕ ತಂತ್ರಜ್ಞಾನ, ರೋಗ ಮಾಹಿತಿ, ರೋಗ ನಿರೋಧಕ ಶಾಸ್ತ್ರ, ರೋಗನಿರ್ಣಯ, ಲಸಿಕೆಗಳು, ಸಾಂಕ್ರಾಮಿಕ ಶಾಸ್ತ್ರ ಹಾಗೂ ಪಶು ಆರೋಗ್ಯ, ವ್ಯವಸ್ಥೆಗಳಲ್ಲಿನ ಇತ್ತೀಚಿನ ಪ್ರಗತಿ, ಜೈವಿಕ ತಂತ್ರಜ್ಞಾನ ಅಳವಡಿಕೆಗಾಗಿ ಉದ್ಯಮ ಸಭೆ/ಸಮಾವೇಶ ಮತ್ತು ರೈತ-ಉದ್ಯಮ-ಶೈಕ್ಷಣಿಕ ಸಹಯೋಗ, ಗಡಿಯಾಚೆ ಹರಡುವ ಪಶು ರೋಗಗಳ ನಿಯಂತ್ರಣ ಮತ್ತು ನಿರ್ಮೂಲನಾ ಕಾರ್ಯಕ್ರಮಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮ್ಮೇಳನದಲ್ಲಿ ಚರ್ಚೆ, ಸಂವಾದಗಳು ನಡೆಯಲಿವೆ.

Written by

Bayalu Simha

Leave a Reply

Your email address will not be published. Required fields are marked *