Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಹೆದ್ದಾರಿ ಅಗಲೀಕರಣಕ್ಕೆ ಜೆಸಿಬಿ ಗರ್ಜನೆ: ಎರಡು ತಿಂಗಳಲ್ಲಿ ರಸ್ತೆ ಪೂರ್ಣ

Share

ಚಿಕ್ಕಬಳ್ಳಾಪುರ: ಎರಡು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ-69ರ ನಗರ ಭಾಗದ ಅಗಲೀಕರಣ ಕಾಮಗಾರಿಗೆ ಕೊನೆಗೂ ವೇಗ ದೊರೆತಿದ್ದು, ಹೆದ್ದಾರಿ ಬದಿಯಲ್ಲಿದ್ದ ಅಂಗಡಿ ಮುಂಗಟ್ಟು, ಕಟ್ಟಡಗಳು ಹಾಗೂ ಮರಗಳನ್ನು ಜೆಸಿಬಿ, ಹಿಟಾಚಿ ಮತ್ತು ಕ್ರೇನ್‌ಗಳ ಮೂಲಕ ತೆರವುಗೊಳಿಸುವ ಕಾರ್ಯಾಚರಣೆ ಬೆಳಗ್ಗೆಯಿಂದ ನಡೆಯಿತು.
ಹೊನ್ನಾವರ–ಗೌರಿಬಿದನೂರು–ಚಿಕ್ಕಬಳ್ಳಾಪುರ ಮೂಲಕ ಚೆನ್ನೈಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-69ರ ಕಾಮಗಾರಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಅಡ್ಡಿಯಾಗಿದ್ದ ಹಲವು ಕಟ್ಟಡಗಳು, ಅಂಗಡಿ ಮುಂಗಟ್ಟುಗಳು ಹಾಗೂ ಬೃಹತ್ ಅರಳಿಮರಗಳನ್ನು ತೆರವುಗೊಳಿಸ ಲಾಯಿತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈ ಹಿಂದೆಯೇ ನೋಟಿಸ್ ನೀಡಲಾಗಿದ್ದರೂ ಕೆಲವರು ವ್ಯಾಪಾರ ಮುಂದುವರಿಸಿದ್ದರು. ಹೀಗಾಗಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಯಂತ್ರೋಪಕರಣಗಳ ಮೂಲಕ ತೆರವು ಕಾರ್ಯಾಚರಣೆ ಕೈಗೊಂಡರು.
ನಗರದ ಪ್ರಮುಖ ಎಂಜಿ ರಸ್ತೆಯಲ್ಲಿ ಎರಡು ವರ್ಷಕ್ಕೂ ಹೆಚ್ಚು ಕಾಲ ಕಾಮಗಾರಿ ನಿಧಾನಗತಿ ಯಲ್ಲಿ ಸಾಗಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಮಧ್ಯರಸ್ತೆಯಿಂದ ಎಡಕ್ಕೆ 40 ಅಡಿ ಹಾಗೂ ಬಲಕ್ಕೆ 40 ಅಡಿ ಜಾಗವನ್ನು ಹೆದ್ದಾರಿ ಅಗಲೀಕರಣಕ್ಕೆ ಗುರುತಿಸಲಾಗಿತ್ತು. ಕೆಲ ಅಂಗಡಿ ಮಾಲೀಕರು ತಾವೇ ಮುಂಭಾಗ ತೆರವುಗೊಳಿಸಿಕೊಂಡು ತಮ್ಮ ಅನುಕೂಲಕ್ಕೆ ತಕ್ಕಂತೆ ಮತ್ತೆ ಕಟ್ಟಡ ನಿರ್ಮಿಸಿಕೊಂಡಿದ್ದರು.
ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣವಾಗಿದ್ದ ಸೇಂಟ್ ಜೋಸೆಫ್ ಕಾನ್ವೆಂಟ್ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗಿನ ಜಮೀನು ಕಂದಾಯ ಇಲಾಖೆಗೆ ಸೇರಿದ್ದೇ ಅಥವಾ ರೈಲ್ವೆ ಇಲಾಖೆಗೆ ಸೇರಿದ್ದೇ ಎಂಬ ಗೊಂದಲವನ್ನು ಜಿಲ್ಲಾಡಳಿತ ಪರಿಹರಿಸಿದೆ. ಇದರಿಂದ ಬಾಕಿ ಉಳಿದಿರುವ ಕಾಮಗಾರಿಗೆ ವೇಗ ದೊರೆತಿದ್ದು, ಇನ್ನೆರಡು ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.
ಕಾರ್ಯಾಚರಣೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿದ್ದ ಹೂವಿನ ಅಂಗಡಿಗಳು, ಹೋಟೆಲ್, ಬಾರ್‌-ರೆಸ್ಟೋರೆಂಟ್‌ಗಳು, ವೆಂಕಟೇಶ್ವರ ಬೇಕರಿ ಸೇರಿದಂತೆ ಹಲವು ವ್ಯಾಪಾರ ಮಳಿಗೆಗಳ ಮುಂಭಾಗ ತೆರವುಗೊಳಿಸಲಾಯಿತು. ಈ ವೇಳೆ ಅಂಗಡಿ ಮಾಲೀಕರು ತಮ್ಮ ಯಂತ್ರೋಪಕರಣ ಹಾಗೂ ಸಾಮಗ್ರಿಗಳನ್ನು ಸುರಕ್ಷಿತವಾಗಿ ತೆಗೆದುಕೊಳ್ಳಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಅಧಿಕಾರಿಗಳು ಈಗಾಗಲೇ ಸಾಕಷ್ಟು ಅವಕಾಶ ನೀಡಲಾಗಿದೆ. ಇನ್ನೂ ತೆರವುಗೊಳಿಸದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

93ರಷ್ಟು ಕಾಮಗಾರಿ ಪೂರ್ಣ!!
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜಾರೆಡ್ಡಿ ಮಾತನಾಡಿ, ತುಮಕೂರು ಜಿಲ್ಲೆಯ ಬೈರೇನಹಳ್ಳಿಯಿಂದ ಚೆನ್ನೈವರೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-69ರ ಶೇ.93ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಚಿಕ್ಕಬಳ್ಳಾಪುರ ನಗರದಲ್ಲಿ ಸುಮಾರು 2 ಕಿ.ಮೀ. ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, ಅದನ್ನು ಪೂರ್ಣಗೊಳಿಸುವ ಕಾರ್ಯ ವನ್ನು ಕೈಗೆತ್ತಿಕೊಳ್ಳಲಾಗಿದೆ. ಮಧ್ಯರಸ್ತೆಯಿಂದ ಎರಡೂ ಬದಿಗೆ ತಲಾ 40 ಅಡಿ ಜಾಗದಲ್ಲಿ ಅಗಲೀಕರಣ ನಡೆಯಲಿದೆ. ಜಿಲ್ಲಾಡಳಿತ, ಪೊಲೀಸ್, ಅರಣ್ಯ ಹಾಗೂ ಬೆಸ್ಕಾಂ ಇಲಾಖೆಗಳು ಮತ್ತು ಸಾರ್ವಜನಿಕರು ಸಹಕಾರ ನೀಡಿದ್ದು, ಎರಡು ತಿಂಗಳಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಹೆದ್ದಾರಿ ಅಗಲೀಕರಣದಿಂದ ನಗರದಲ್ಲಿ ಸುಗಮ ಸಂಚಾರಕ್ಕೆ ದಾರಿ ತೆರೆಯುವ ನಿರೀಕ್ಷೆ ಒಂದೆಡೆ ಯಾದರೆ, ಹಲವು ವರ್ಷಗಳಿಂದ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದವರಿಗೆ ಅಂಗಡಿ ಮುಂಗಟ್ಟು ಕಳೆದುಕೊಳ್ಳುವ ನೋವು ಮತ್ತೊಂದೆಡೆ ಕಾಣಿಸಿಕೊಂಡಿದೆ. ಅಭಿವೃದ್ಧಿ ಕಾಮಗಾರಿಯ ವೇಗದ ಜತೆಗೆ, ಬಾಧಿತ ವ್ಯಾಪಾರಸ್ಥರ ಜೀವನೋಪಾಯದ ಬಗ್ಗೆಯೂ ಸೂಕ್ತ ಕಾಳಜಿ ವಹಿಸ ಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.

Written by

Bayalu Simha

Leave a Reply

Your email address will not be published. Required fields are marked *