Skip to content
Monday, 5 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಜಿಲ್ಲಾ ಜಾಗೃತಿ ಸಮಿತಿ ಸದಸ್ಯರ ಆಯ್ಕೆಯಲ್ಲಿ ತಾರತಮ್ಯ : ಸೂಲಿಕುಂಟೆ ರಮೇಶ್

Share

ಬಂಗಾರಪೇಟೆ : ಎಸ್‌ಸಿ–ಎಸ್‌ಟಿ ಸಮುದಾಯದವರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ದೌರ್ಜನ್ಯ ತಡೆ ಕಾಯ್ದೆಯಡಿ ರಚಿಸಲಾಗುವ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಮೇಲ್ವಿಚಾರಣಾ ಸಮಿತಿಯ ಅಧಿಕಾರೇತರ ಸದಸ್ಯರ ಆಯ್ಕೆಯಲ್ಲಿ ಜಿಲ್ಲಾಡಳಿತ ನಿಯಮಗಳನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಆರೋಪಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಿತಿಯ ಸದಸ್ಯರ ಆಯ್ಕೆಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೂ ಸಮಾನ ಪ್ರಾತಿನಿಧ್ಯ ಕಲ್ಪಿಸಬೇಕು. ಆದರೆ ಕೋಲಾರ ತಾಲ್ಲೂಕಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲ್ಲೂಕುಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಲಾಗುತ್ತಿಲ್ಲ ಎಂದು ದೂರಿದರು.

1989ರ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ನಿಯಮಗಳು ಹಾಗೂ 1995ರ ನಿಯಮ 17 ಮತ್ತು ಸರ್ಕಾರದ ವಿವಿಧ ಸುತ್ತೋಲೆಗಳನ್ವಯ ಸಮಿತಿಯಲ್ಲಿ ಎಸ್‌ಸಿ ಸಮುದಾಯದಿಂದ ಮೂವರು, ಎಸ್‌ಟಿ ಸಮುದಾಯದಿಂದ ಇಬ್ಬರು ಹಾಗೂ ಸ್ವಯಂಸೇವಾ ಸಂಸ್ಥೆಗಳಿಂದ ಮೂವರು ಸೇರಿದಂತೆ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಬೇಕಿದೆ. ಆದರೆ 2014ರಿಂದ ರಚನೆಯಾಗಿರುವ ಸಮಿತಿಗಳಲ್ಲಿಯೂ ಪ್ರಾದೇಶಿಕ ಸಮತೋಲನ ಕಾಯ್ದುಕೊಂಡಿಲ್ಲ ಎಂದು ಆರೋಪಿಸಿದರು.

ಹಿರಿಯ ದಲಿತ ಹೋರಾಟಗಾರರ ಕಡೆಗಣನೆ:

ಹಲವು ವರ್ಷಗಳಿಂದ ದಲಿತ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಿರಿಯ ಹೋರಾಟಗಾರರನ್ನು ಕಡೆಗಣಿಸಿ, ಶಾಸಕರು ಹಾಗೂ ಸಂಸದರ ಶಿಫಾರಸು ಆಧರಿಸಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯರ ಆಯ್ಕೆಯಲ್ಲಿ ಸಾಮಾಜಿಕ ಸೇವೆ, ವಯಸ್ಸು, ಶೈಕ್ಷಣಿಕ ಅರ್ಹತೆ ಹಾಗೂ ಹೋರಾಟದ ಹಿನ್ನೆಲೆಯನ್ನು ಪರಿಗಣಿಸಬೇಕು. ಈಗಾಗಲೇ ಮೂರು ಬಾರಿ ಸಮಿತಿಯಲ್ಲಿ ಸದಸ್ಯರಾಗಿದ್ದವರನ್ನೇ ಪುನಃ ಪುನಃ ನೇಮಕ ಮಾಡುವ ಬದಲು ಹೊಸ ಮುಖಗಳು ಹಾಗೂ ನೈಜ ಹೋರಾಟಗಾರರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನಿಯಮಾನುಸಾರ ಮೀಸಲಾತಿ ಪಾಲನೆಗೆ ಆಗ್ರಹ:

ಎಸ್‌ಸಿ ಸಮುದಾಯಕ್ಕೆ ಮೂರು ಹಾಗೂ ಎಸ್‌ಟಿ ಸಮುದಾಯಕ್ಕೆ ಎರಡು ಸ್ಥಾನಗಳನ್ನು ನೀಡಬೇಕಿರುವ ಸಂದರ್ಭದಲ್ಲಿ ಎಸ್‌ಟಿ ಸಮುದಾಯಕ್ಕೆ ಮೂರು ಸ್ಥಾನಗಳನ್ನು ನೀಡಲಾಗಿದೆ ಎಂಬುದು ನಿಯಮ ಉಲ್ಲಂಘನೆಯಾಗಿದೆ ಎಂದು ರಮೇಶ್ ಆರೋಪಿಸಿದರು.

ಬಂಗಾರಪೇಟೆಯ ವಿಜಯಲಕ್ಷ್ಮಿ ಅವರಿಗೆ ಅವಕಾಶ ನೀಡಿರುವುದನ್ನು ಸ್ವಾಗತಿಸಿದ ಅವರು, ಅವರನ್ನು ಮಹಿಳಾ ಕೋಟಾದಡಿ ಪರಿಗಣಿಸಿ, ಉಳಿದ ಎಸ್‌ಸಿ ಸ್ಥಾನಗಳನ್ನು ಅರ್ಹ ಹಾಗೂ ಹಿರಿಯ ದಲಿತ ಹೋರಾಟಗಾರರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಸಮಿತಿಯ ಸದಸ್ಯತ್ವಕ್ಕಾಗಿ ಒಟ್ಟು 13 ಅರ್ಜಿಗಳು ಸಲ್ಲಿಕೆಯಾಗಿದ್ದು, ಯಾವ ಮಾನದಂಡದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ ಎಂಬುದನ್ನು ಜಿಲ್ಲಾಡಳಿತ ಬಹಿರಂಗಪಡಿಸಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಆಯ್ಕೆ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಕೂಡಲೇ ಮರುಪರಿಶೀಲಿಸಿ, ಎಲ್ಲ ತಾಲ್ಲೂಕುಗಳಿಗೂ ಸಮಾನ ಪ್ರಾತಿನಿಧ್ಯ ಹಾಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕು. ಇಲ್ಲವಾದರೆ ಜಿಲ್ಲಾಡಳಿತದ ವಿರುದ್ಧ ಕಾನೂನು ಹೋರಾಟ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ಸೂಲಿಕುಂಟೆ ರಮೇಶ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಕದಸಂಸ ಸಂಚಾಲಕ ದೇಶಿಹಳ್ಳಿ ಶ್ರೀನಿವಾಸ್, ಕೇಶವಮೂರ್ತಿ, ಶಿವಕುಮಾರ್, ಮಾಟಪ್ಪ, ಗುರುಮೂರ್ತಿ, ಶ್ರೀನಿವಾಸ್, ಅಪ್ಪು, ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Written by

Bayalu Simha

Leave a Reply

Your email address will not be published. Required fields are marked *