ಬಂಗಾರಪೇಟೆ: ಮಳೆ ಕೈಕೊಟ್ಟು ಬೆಳೆ ನಷ್ಟವಾಗಿರುವ ಸಂದರ್ಭದಲ್ಲಿ ರೈತರಿಗೆ ಸಾಲ ತೀರಿಸುವುದೇ ದೊಡ್ಡ ಸವಾಲಾಗಿದ್ದರೂ, ಹಳೆಯ ಸಾಲ ವಸೂಲಾತಿಗೆ ಒತ್ತಡ ಮುಂದುವರಿದಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕಾರಮಂಗಲ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘವು ರೈತರ ನೆರವಿಗೆ ನಿಂತು, ಹಳೆಯ ಸಾಲ ನವೀಕರಣಕ್ಕಾಗಿ ₹1 ಕೋಟಿಗೂ ಅಧಿಕ ಹಣವನ್ನು ತಾತ್ಕಾಲಿಕವಾಗಿ ಹೊಂದಿಸಿ ಬ್ಯಾಂಕ್‌ಗೆ ಜಮೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಎಸ್.ಮಂಜುನಾಥ್ ತಿಳಿಸಿದರು
ಕಾರಮಂಗಲದಲ್ಲಿ ನಡೆದ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಹಿಂದೆ ಕೇವಲ ದಾಖಲೆಗಳ ಆಧಾರದ ಮೇಲೆ ಸಾಲ ನವೀಕರಣ ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ನಿಯಮದಂತೆ ಹಳೆಯ ಸಾಲದ ಅಸಲು ಮೊತ್ತವನ್ನು ಖಾತೆಗೆ ಜಮೆ ಮಾಡಿದ ನಂತರವೇ ಸಾಲ ನವೀಕರಣಕ್ಕೆ ಅವಕಾಶವಿದೆ. ರೈತರ ಬಳಿ ನಗದು ಕೊರತೆಯಿದ್ದ ಕಾರಣ ಆಡಳಿತ ಮಂಡಳಿಯವರು ಹಣ ಹೊಂದಿಸಿ ರೈತರ ಸಾಲ ನವೀಕರಣಕ್ಕೆ ನೆರವಾಗಿದ್ದಾರೆ. ಇದಕ್ಕೆ ತಗುಲಿದ ಬಡ್ಡಿಯನ್ನೂ ಸಂಘದ ವತಿಯಿಂದಲೇ ಭರಿಸಲಾಗಿದೆ ಎಂದು ಹೇಳಿದರು.
₹2 ಕೋಟಿಗೂ ಅಧಿಕ ಹೊಸ ಸಾಲದ ಬೇಡಿಕೆ:
ಸಂಘದ ವ್ಯಾಪ್ತಿಯ ಏಳು ಗ್ರಾಮಗಳ ರೈತರ ಅಗತ್ಯಕ್ಕೆ ಸ್ಪಂದಿಸಲು ಈ ವರ್ಷ 250ಕ್ಕೂ ಹೆಚ್ಚು ರೈತರಿಗೆ ಹೊಸ ಸಾಲ ನೀಡುವ ಉದ್ದೇಶದಿಂದ ಎನ್‌ಸಿಎಲ್ ಪಟ್ಟಿ ಸಿದ್ಧಪಡಿಸಿ ಕಳುಹಿಸಲಾಗಿದೆ. ಸದ್ಯ ₹2 ಕೋಟಿಗೂ ಅಧಿಕ ಹೊಸ ಸಾಲದ ಬೇಡಿಕೆ ಇದ್ದು, ಅರ್ಹ ಎಲ್ಲ ರೈತರಿಗೂ ಸಾಲ ಸೌಲಭ್ಯ ಕಲ್ಪಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದರು.
ಕೋಲಾರ ಡಿಸಿಸಿ ಬ್ಯಾಂಕಿನ ಹೊಸ ಆಡಳಿತ ಮಂಡಳಿ ರಚನೆಯಾದ ಬಳಿಕ ಮೇಲ್ವಿಚಾರಕರು ಹಾಗೂ ವ್ಯವಸ್ಥಾಪಕರು ಸಂಘಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತರಿಗೆ ಅಗತ್ಯವಿರುವಷ್ಟು ಹೊಸ ಸಾಲ ಒದಗಿಸಲು ಬ್ಯಾಂಕ್ ಸಮ್ಮತಿಸಿದೆ ಎಂದುರು.
ಇತರ ಸಂಘಗಳಲ್ಲಿ ಸಾಲ ಮರುಪಾವತಿ ಸಮಸ್ಯೆ ಎದುರಾಗಿದ್ದರೂ, ಕಾರಮಂಗಲ ಸಂಘದ ರೈತರು ಹಾಗೂ ಸ್ತ್ರೀಶಕ್ತಿ ಸಂಘಗಳಲ್ಲಿ ಯಾವುದೇ ಸುಸ್ತಿದಾರರಿಲ್ಲ. ಸದಸ್ಯರು ನಿಯಮಿತವಾಗಿ ಸಾಲ ಮರುಪಾವತಿ ಮಾಡುತ್ತಿರುವುದರಿಂದ ಸಂಘ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ ಎಂದರು.
ಸಂಘದಲ್ಲಿ ಆರಂಭದಲ್ಲಿ 900 ಷೇರುದಾರರಿದ್ದರು. ನಿಯಮದಂತೆ ತಲಾ ₹1,000 ಷೇರು ಹಣ ಪಾವತಿಸಬೇಕಾಗಿದ್ದು, ₹500 ಮಾತ್ರ ಪಾವತಿಸಿ ಉಳಿದ ₹500 ಪಾವತಿಸದ 750 ಸದಸ್ಯರ ಸದಸ್ಯತ್ವ ಹಿಂಪಡೆಯಲಾಗಿದೆ. ಪ್ರಸ್ತುತ ಪೂರ್ಣ ಷೇರು ಹಣ ಪಾವತಿಸಿರುವ 185 ಸಕ್ರಿಯ ಸದಸ್ಯರಿದ್ದಾರೆ. ಬಾಕಿ ₹500 ಪಾವತಿಸಿದರೆ ಸಂಬಂಧಪಟ್ಟ ಸದಸ್ಯರು ಮತ್ತೆ ಸಂಘದ ಸೌಲಭ್ಯ ಪಡೆಯಲು ಅರ್ಹರಾಗಲಿದ್ದಾರೆ ಎಂದು ತಿಳಿಸಿದರು.
ಮುಂಬರುವ ವಾರ್ಷಿಕ ಸರ್ವಸದಸ್ಯರ ಸಭೆಯೊಳಗಾಗಿ ಅರ್ಹ ರೈತರಿಗೆ ಹೊಸ ಸಾಲ ತಲುಪಿಸುವ ಗುರಿ ಹೊಂದಲಾಗಿದೆ. ರೈತರ ಸಂಕಷ್ಟದ ಸಂದರ್ಭದಲ್ಲಿ ಸಹಕಾರ ಸಂಘವು ಕೇವಲ ಸಾಲ ನೀಡುವ ಸಂಸ್ಥೆಯಾಗಿರದೆ, ಅವರ ಬೆನ್ನಿಗೆ ನಿಲ್ಲುವ ಸಂಸ್ಥೆಯಾಗಬೇಕು ಎಂಬ ಉದ್ದೇಶದಿಂದ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಚ್ ಕೃಷ್ಣಪ್ಪ, ನಿರ್ದೇಶಕರಾದ ಮರಿಯಪ್ಪ, ಆಂಜನೇಯರೆಡ್ಡಿ, ಮುನಿಯಪ್ಪ, ಟಿ.ಆರ್.ರಾಜೇಶ್, ಬೈರಮ್ಮ, ಪ್ರಮೀಳಾ, ಕಮಲಮ್ಮ ಹಾಗೂ ಸಿಇಒ ಎಂ.ಪ್ರಕಾಶ್ ಉಪಸ್ಥಿತರಿದ್ದರು
