ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ, ಇತ್ತೀಚೆಗೆ ಕರಡು ಪಟ್ಟಿಯಿಂದ ಹೆಸರು ಕೈಬಿಡಲಾದ ಹಳ್ಳೂರ ಗ್ರಾಮದ ಮತದಾರರನ್ನು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಖುದ್ದಾಗಿ ಕರೆಯಿಸಿ ಮೂಡಲಗಿ ತಹಸೀಲ್ದಾರ್ ಶ್ರೀಶೈಲ ಗುಡುಮೆ ಅವರ ನೇತೃತ್ವದಲ್ಲಿ ವಿಶೇಷ ಅಹವಾಲು ಆಲಿಕೆ (Hearing) ಸಭೆಯನ್ನು ನಡೆಸಲಾಯಿತು.
ಮನೆ ಮನೆ ಸಮೀಕ್ಷೆಯ ಸಂದರ್ಭದಲ್ಲಿ ಹಾಗೂ ತಾಂತ್ರಿಕ ಪ್ರಕ್ರಿಯೆಗಳಲ್ಲಿ ಕಂಡುಬಂದ ನೋ ಮ್ಯಾಪಿಂಗ್ ಮತ್ತು ಲಾಜಿಕಲ್ ಡಿಸ್ಕ್ರಿಪೆನ್ಸಿ ತಾರ್ಕಿಕ ವೈರುಧ್ಯ) ಕಾರಣಗಳಿಂದಾಗಿ ಹಲವು ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟು ಹೋಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಹಳ್ಳೂರ ಗ್ರಾಮ ಪಂಚಾಯಿತಿಯಲ್ಲೇ ಖುದ್ದಾಗಿ ಬೀಡುಬಿಟ್ಟು ಬಾಧಿತ ಮತದಾರರ ಅಹವಾಲುಗಳನ್ನು ಆಲಿಸಿದರು.

ತಾಂತ್ರಿಕ ದೋಷಗಳ ಪರಿಶೀಲನೆ ಭಾಗ ಸಂಖ್ಯೆ ಹಾಗೂ ಮತಗಟ್ಟೆಗಳ ಸರಿಯಾದ ಮ್ಯಾಪಿಂಗ್ ಆಗದ ಕಾರಣ ಮತ್ತು ವಯಸ್ಸು, ಲಿಂಗ ಅಥವಾ ಒಂದೇ ಕುಟುಂಬದ ವಿವರಗಳಲ್ಲಿ ಕಂಡುಬಂದ ತಾರ್ಕಿಕ ತಪ್ಪುಗಳಿಂದಾಗಿ ತಂತ್ರಾಂಶದಲ್ಲಿ ಹೆಸರುಗಳು ತಡೆಹಿಡಿಯಲ್ಪಟ್ಟಿದ್ದ ಪ್ರಕರಣಗಳನ್ನು ತಹಸೀಲ್ದಾರ್ ಸಮ್ಮುಖದಲ್ಲೇ ಚುನಾವಣಾ ಶಾಖೆಯ ಸಿಬ್ಬಂದಿ ಕೂಲಂಕಷವಾಗಿ ಪರಿಶೀಲಿಸಿದರು.
ಮರುಸೇರ್ಪಡೆಗೆ ತಕ್ಷಣದ ಕ್ರಮ ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ತಾಕೀತು ಮಾಡಿದ ತಹಸೀಲ್ದಾರ್, ಲೋಪಗಳನ್ನು ಸರಿಪಡಿಸಿ ಫಾರಂ-6 ಅಥವಾ ಅಗತ್ಯ ನಮೂನೆಗಳ ಮೂಲಕ ಹೆಸರುಗಳನ್ನು ಮರುಸೇರ್ಪಡೆ ಮಾಡಲು ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಸ್ಥಳದಲ್ಲೇ ಆದೇಶಿಸಿದರು.
ದೋಷಮುಕ್ತ ಪಟ್ಟಿಯ ಭರವಸೆ: ತಾಂತ್ರಿಕ ತಪ್ಪುಗಳಿಂದಾಗಿ ಯಾವುದೇ ಒಬ್ಬ ಅರ್ಹ ನಾಗರಿಕನೂ ಮತದಾನದ ಹಕ್ಕಿನಿಂದ ವಂಚಿತನಾಗದಂತೆ ತಡೆಗಟ್ಟಲು ಇಲಾಖೆ ಬದ್ಧವಾಗಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ತಹಸೀಲ್ದಾರ್ ಶ್ರೀಶೈಲ ಗುಡುಮೆ ಅವರು ಜನಸಾಮಾನ್ಯರಿಗೆ ಭರವಸೆ ನೀಡಿದರು.
ಈ ವಿಶೇಷ ವಿಚಾರಣಾ ಸಭೆಯಲ್ಲಿ ಶಿವುಕುಮಾರ ಶೆಟ್ಟರ, ಶಿವಾನಂದ ಸಾಲಳ್ಳಿ, ಗ್ರಾಮ ಆಡಳಿತಾಧಿಕಾರಿ ಸಂಜು ಅಗ್ನೆಪ್ಪಗೊಳ, ಸಮಾಜ ಸೇವಕ ಮುರಿಗೆಪ್ಪ ಮಾಲಗಾರ, ಶಿವಾನಂದ ಸಂಪಗಾರ, ಸಿ ಆರ್ ಪಿ ಆರ್ ಎನ್ ಪಾನಾರೆ ಬೂತ್‌ಗಳ ಬಿಎಲ್‌ಒಗಳಾದ ಪ್ರಕಾಶ ಮೋರೆ, ಮುತ್ತಪ್ಪ ಹುಕ್ಕೇರಿ, ರಾಮು ಹರಿಜನ, ಶಾನೂರ ನಾವಿ.ಅಶೋಕ್ ಹೆಗ್ಗಾನಿ, ಶಿವಾಜಿ ಮರೆಕ್ಕನ್ನವರ, ನಾಗರಾಜ ಯದ್ದಲಗುಡ್ಡ, ರಮೇಶ ಸವದಿ, ಭೀರಪ್ಪ ಮೆಣಸೆಪ್ಪಗೊಳ ಹಾಗೂ ನೂರಾರು ಮತದಾರರು ಉಪಸ್ಥಿತರಿದ್ದು, ತಮ್ಮ ಹಕ್ಕನ್ನು ಮರಳಿ ಪಡೆಯಲು ದಾಖಲೆಗಳನ್ನು ಸಲ್ಲಿಸಿದರು. ತಹಸೀಲ್ದಾರ್ ಅವರ ಈ ತ್ವರಿತ ಮತ್ತು ನೇರ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಶ್ಲಾಘನೆ ವ್ಯಕ್ತವಾಗಿದೆ.
