Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಬಳ್ಳಾರಿಯಲ್ಲಿ ವಿಶ್ವ ಜಾನಪದ ದಿನಾಚರಣೆ:

Share

ವಿದ್ಯಾರ್ಥಿ– ಯುವಜನರಲ್ಲಿ ನಾಡಿನ ಜಾನಪದ ಕಲೆಗಳ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ : ಡಾ.‌ಸತೀಶ್ ಹಿರೇಮಠ ಹರ್ಷ

ಬಳ್ಳಾರಿ, ಸೆ.3: ವಿದ್ಯಾರ್ಥಿ ಮತ್ತು ಯುವಜನರಲ್ಲಿ ನಾಡಿನ ಜಾನಪದ ಕಲೆಗಳ ಬಗ್ಗೆ ಆಸಕ್ತಿ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು
ಶ್ರೀ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸತೀಶ್ ಎ ಹಿರೇಮಠ ಅವರು ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕ ಹಾಗೂ ಹಳೇ ದರೋಜಿ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ಸಹಯೋಗದಲ್ಲಿ ನಗರದ ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕತೆಯ ಅಬ್ಬರ, ಮೊಬೈಲ್ ಹಾವಳಿ ನಡುವೆಯೂ ಯುವ ಪೀಳಿಗೆ ನಮ್ಮ ಮಣ್ಣಿನ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಉತ್ಸಾಹ ತೋರುತ್ತಿದ್ದಾರೆ ಎಂದು ಹೇಳಿದರು.
ನಾಡಿನ ಕಾಲೇಜುಗಳಲ್ಲಿ ಜಾನಪದ ಜಾತ್ರೆ, ಹಬ್ಬ, ಯುವ ಜನೋತ್ಸವಗಳು ಜನಪ್ರಿಯಗೊಳ್ಳುತ್ತಿವೆ. ಇದು ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಲು ಸಹಕಾರಿ ಎಂದು ತಿಳಿಸಿದರು.
ಬಿ.ಇಡಿ ಅಧ್ಯಯನ ಮಾಡುತ್ತಿರುವ ಪ್ರಕ್ಷಶಿಕ್ಷಾಣಾರ್ಥಿಗಳಿಗೆ ಸಾಹಿತ್ಯ, ಜಾನಪದ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಪರಿಚಯ, ಭಾಗವಹಿಸುವಿಕೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಶಾಲಾ ಶಿಕ್ಷಣ ಇಲಾಖೆಯ ವಿಶ್ರಾಂತ ಡಿಡಿಪಿಐ, ಸಾಹಿತಿ ಮಲ್ಲಿಕಾರ್ಜುನಸ್ವಾಮಿ‌ ಹಿರೇಮಠ(ಮಹಿಮ) ಅವರು ಮಾತನಾಡಿ, ನಾಡೋಜ ಬುರ್ರಕಥಾ ಈರಮ್ಮ ಅವರು ಜ್ಞಾನದ ಗಣಿಯಾಗಿದ್ದರು. ಇವರು ಕನ್ನಡ ನಾಡಿನ ಹೆಮ್ಮೆ ಎಂದು ಕೊಂಡಾಡಿದರು.
ವಿದ್ಯಾರ್ಥಿ ಯುವಜನತೆ ಸದಾ ಲವಲವಿಕೆಯಿಂದ ಇರಬೇಕು. ಈ ಕ್ಷಣ ನಮ್ಮದಾಗಿರುತ್ತದೆ.
ಹಿಂದೆ ನಡೆದ ಕಹಿ ಘಟನೆಗಳನ್ನು ಸರಿಪಡಿಸುವುದು ಆಗುವುದಿಲ್ಲ ಆದರೆ ಕಲಿತ ಪಾಠ, ಅನುಭವದಿಂದ ವರ್ತಮಾನವನ್ನು ಸಂತೋಷದಿಂದ ಕಳೆಯಲು ಸಾಧ್ಯ ಎಂದು ಹೇಳಿದರು.
ತಹಶೀಲ್ದಾರ್ ವಿನಾಯಕ ಗೋಡಬೋಲೆ ಅವರು ಮಾತನಾಡಿ ಜಾನಪದ, ಬಾಯಿಂದ ಬಾಯಿಗೆ ಹರಿದು ಬಂದ ಪ್ರಾಚೀನ ಕಲೆ ಮತ್ತು ಸಂಪ್ರದಾಯ ಮಾತ್ರವಲ್ಲ ಇದು ಜ್ಞಾನಪದವೂ ಹೌದು ಎಂದು ತಿಳಿಸಿದರು.
ಜಾನಪದವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
‘ಬಳ್ಳಾರಿ ಜಿಲ್ಲೆಯ ಜಾನಪದ ಪರಂಪರೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಜಾನಪದ ಗಾಯಕ, ಸಂಘಟಕ ಎಸ್ ಎಂ ಹುಲುಗಪ್ಪ, ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ
ಬಳ್ಳಾರಿ ಜಿಲ್ಲೆಯು ಅತ್ಯಂತ ಶ್ರೀಮಂತವಾದ ಜಾನಪದ ಪರಂಪರೆ, ಕಲೆ ಮತ್ತು ಸಂಸ್ಕೃತಿಯನ್ನು ಹೊಂದಿದೆ ಎಂದರು.
ಜಾನಪದ ವಿದ್ವಾಂಸರಾದ ನಾಡೋಜ ಮುದೇನೂರು ಸಂಗಣ್ಣ, ಡಾ. ಮಲಶೆಟ್ಟಿ, ಜಾನಪದ ಕಲಾವಿದರಾದ ನಾಡೋಜ ಬೆಳಗಲ್ಲು ವೀರಣ್ಣ, ನಾಡೋಜ ಬುರ್ರಕಥಾ ಈರಮ್ಮ, ನಾಡೋಜ ಕಪ್ಪಗಲ್ಲು ಪದ್ಮಮ್ಮ ಮತ್ತಿತರರು ಜಿಲ್ಲೆಯ ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.
ಎಲ್ಲ ಸಾಹಿತ್ಯ ಪ್ರಕಾರಗಳಿಗೆ ಜಾನಪದವೇ ತಾಯಿಬೇರು ಎಂದು ಹೇಳಿದರು.
ಕಾಲೇಜಿನ 2026-27 ಸಾಲಿನ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಪ್ರತಿನಿಧಿ ಒಕ್ಕೂಟ ರಚನೆಯ ಫಲಕ ಉದ್ಘಾಟಿಸಿದ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.‌ಮಂಜುನಾಥ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ತರಗತಿಯಲ್ಲಿ ಚೆನ್ನಾಗಿ ಕಲಿತರೆ ಮಾತ್ರ ಭವಿಷ್ಯದಲ್ಲಿ ಮಕ್ಕಳಿಗೆ ಉತ್ತಮವಾಗಿ ಪಾಠ ಮಾಡಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲೆಯ ಸಮಾನ ಮನಸ್ಕ ಸಂಘ ಸಂಸ್ಥೆಗಳೊಂದಿಗೆ ಪರಿಷತ್ತು ಪ್ರಶಿಕ್ಷಣಾರ್ಥಿಗಳ ಮನೋ‌ವಿಕಾಸಕ್ಕಾಗಿ ಹಂತ ಹಂತವಾಗಿ ತಜ್ಞರಿಂದ ವಿಶೇಷ ಉಪನ್ಯಾನ, ಕಾರ್ಯಾಗಾರಗಳನ್ನು ಏರ್ಪಡಿಸಲು ಚಿಂತನೆ ನಡೆಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೌಸಿಯಾ ಎಜ್ಯುಕೇಷನ್ ಮೈನಾರಿಟೀಸ್ ಸೊಸೈಟಿಯ ಕಾರ್ಯದರ್ಶಿ ತಾಜುದ್ದೀನ್ ಪಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗೌಸಿಯಾ ಎಜ್ಯುಕೇಷನ್ ಮೈನಾರಿಟೀಸ್ ಸೊಸೈಟಿಯ ಅಧ್ಯಕ್ಷೆ ಆಲ್ಮಸ್ ತಬಸಮ್, ಆಡಳಿತಾಧಿಕಾರಿ ಹಫೀಜಾ ಬೇಗಂ ಮತ್ತಿತರರು ಉಪಸ್ಥಿತರಿದ್ದರು.
ಜಾನಪದ ಕಲಾ ಸಂಭ್ರಮ: ಹೆಸರಾಂತ ಜಾನಪದ ಗಾಯಕ ಎಸ್ ಎಮ್ ಹುಲುಗಪ್ಪ ಮತ್ತು ತಂಡ ಮತ್ತು ಪ್ರಶಿಕ್ಷಣಾರ್ಥಿಗಳಿಂದ ಜಾನಪದ ಗಾಯನ, ಜಾನಪದ ನೃತ್ಯ, ಸಮೂಹ ಗಾಯನ ನೆರೆದಿದ್ದ ಸಭಿಕರು ಮತ್ತು ಗಣ್ಯರನ್ನು ಆಕರ್ಷಿಸಿತು.
ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ, ಕಾಲೇಜಿನ ಪ್ರಾಂಶುಪಾಲ ಡಾ. ಅಶ್ವರಾಮು ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ‌ ಮಾತನಾಡಿದರು. ವಿದ್ಯಾರ್ಥಿಗಳಾದ ಮಂಜುನಾಥ ಮತ್ತು ಕವಿತಾ ನಿರೂಪಿಸಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಂಥೋನಿ. ಐ ಅವರು ವಂದಿಸಿದರು. ವಿದ್ಯಾರ್ಥಿನಿ ದೀಪಿಕಾ ಪ್ರಾರ್ಥಿಸಿದರು.
ಸಾಂಸ್ಕೃತಿಕ ಕಾರ್ಯದರ್ಶಿ ದೊಡ್ಡಬಸಪ್ಪ, ಹಂಪಮ್ಮ ಮತ್ತು ಉಪನ್ಯಾಸಕಿ ನಾಗವೇಣಿ ನಿರ್ವಹಿಸಿದರು.

Written by

Bayalu Simha

Leave a Reply

Your email address will not be published. Required fields are marked *