ಬಂಗಾರಪೇಟೆ: ಆರ್ಥಿಕ ಸಂಕಷ್ಟದ ನಡುವೆಯೂ ರೈತರ ಭಾವನಾತ್ಮಕ ಬೆಸುಗೆಯಾಗಿ ಮತ್ತು ಜೀವನಾಡಿಯಾಗಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಹಾಲಿನ ಕೃಷಿ ಕೃಷಿಕರ ಬದುಕಿಗೆ ನವೋತ್ಸಾಹ ತುಂಬಿದೆ ಎಂದು ಕೋಚಿಮುಲ್ ಶಿಬಿರ ಕಚೇರಿಯ ಪ್ರಭಾರಿ ವ್ಯವಸ್ಥಾಪಕ ಅಮರೇಶ್ ತಿಳಿಸಿದರು.
ತಾಲೂಕಿನ ಕಾರಮಂಗಲ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳು ಅವನತಿಯತ್ತ ಸಾಗುತ್ತಿರುವ ಪ್ರಸ್ತುತ ದಿನಗಳಲ್ಲಿ, ಕ್ಷೀರ ಕ್ರಾಂತಿ ಮತ್ತು ಹಾಲು ಉತ್ಪಾದನಾ ಕ್ಷೇತ್ರವು ರೈತರ ಬದುಕಿನೊಂದಿಗೆ ಹಾಸುಹೊಕ್ಕಾಗಿದೆ. ಆರ್ಥಿಕ ಸ್ವಾವಲಂಬನೆಗೆ ಇದು ಪ್ರಮುಖ ದಾರಿಯಾಗಿದೆ ಎಂದರು.
ಹಾಲು ಉತ್ಪಾದಕರ ಶ್ರಮ ಲಾಭದತ್ತ ಸಂಘ:
ವಿಸ್ತರಣಾಧಿಕಾರಿ ಎಂ. ನಟರಾಜ್ ಮಾತನಾಡಿ
ಹಾಲು ಉತ್ಪಾದಕರ ಶ್ರಮದ ಫಲವಾಗಿ ಕಾರಮಂಗಲ ಸಂಘವು ಉತ್ತಮ ಸಾಧನೆ ಮಾಡಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 2,78,202 ಲೀಟರ್ ಹಾಲು ಶೇಖರಣೆ ಮಾಡಲಾಗಿದ್ದು, 11,75,202 ರೂ.ಗಳ ನಿವ್ವಳ ಲಾಭ ಗಳಿಸಲಾಗಿದೆ. ಸಂಘದ ಸದಸ್ಯರಿಗೆ ಪ್ರತಿ 100 ರೂಪಾಯಿಗೆ 2.29 ರೂ.ಗಳ ಬೋನಸ್ ನೀಡಲಾಗುತ್ತಿದೆ” ಎಂದರು.
ಒಕ್ಕೂಟದ ಧೋರಣೆಗೆ ಸಂಘದ ಅಧ್ಯಕ್ಷರ ಆಕ್ರೋಶ:
ಕಾರಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಸಿ. ಮುನಿರಾಜ ಮಾತನಾಡಿ ಕೋಲಾರ ಜಿಲ್ಲಾ ಹಾಲು ಒಕ್ಕೂಟದ (ಕೋಮುಲ್) ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು,
”ಕಳೆದ ಮೂರು ವರ್ಷಗಳಿಂದ ಒಕ್ಕೂಟದಿಂದ ಪ್ರಾದೇಶಿಕ ಸಭೆಗಳನ್ನು ನಡೆಸದೇ ಇರುವುದರಿಂದ ರೈತರ ದ್ವನಿ ಹಾಗೂ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ರೈತರನ್ನು ಕೇವಲ ಜೀತದಾಳುಗಳಂತೆ ನೋಡಲಾಗುತ್ತಿದೆ. ಹಸುವಿನ ಮೇವಿನ ಬೆಲೆ ಗಗನಕ್ಕೇರಿದ್ದು, ರೈತರು ಸಾಲ ಮಾಡಿ ಹಸುಗಳನ್ನು ಸಾಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಾಲಿನ ದರ ಏರಿಕೆ ವಿಚಾರದಲ್ಲಿ ಒಕ್ಕೂಟವು ಸರ್ಕಾರದ ಕಡೆಗೆ ಬೆರಳು ತೋರಿಸಿ ಜಾರಿಕೊಳ್ಳುವುದು ಸರಿಯಲ್ಲ. ಒಕ್ಕೂಟವೇ ಸ್ವತಃ ಹಾಲಿನ ದರವನ್ನು ಲೀಟರ್ಗೆ 2 ರೂಪಾಯಿ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಕಳೆದ ಮೂರು ವರ್ಷಗಳಿಂದ ಸಮರ್ಪಕವಾಗಿ ಕೌ-ಮ್ಯಾಟ್, ಚಾಫ್ ಕಟರ್ ಹಾಗೂ ಹಾಲು ಕರೆಯುವ ಯಂತ್ರಗಳನ್ನು ರೈತರಿಗೆ ನೀಡುತ್ತಿಲ್ಲ. ಪಶುವೈದ್ಯರ ಕೊರತೆ ಮತ್ತು ಅಸಮರ್ಪಕ ನಿರ್ವಹಣೆಯಿಂದಾಗಿ ರೈತರು ಖಾಸಗಿಯಾಗಿ ಹೆಚ್ಚಿನ ಹಣ ನೀಡಿ ವೈದ್ಯಕೀಯ ಸೌಲಭ್ಯ ಪಡೆಯುವಂತಾಗಿದೆ. ಒಕ್ಕೂಟವು ಸಂಪೂರ್ಣವಾಗಿ ನಿದ್ರಾವಸ್ಥೆಯಲ್ಲಿದ್ದು, ತಕ್ಷಣವೇ ರೈತರ ಪರವಾಗಿ ಸ್ಪಂದಿಸಬೇಕಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಎಂ.ಭತ್ಯಪ್ಪ, ಕೆ. ಎಸ್. ಸತ್ಯನಾರಾಯಣ ರಾವ್, ಬೈರಪ್ಪ, ಕೆ.ಎಂ.ಬೈರೇಗೌಡ, ಕೆ.ಜಿ.ಮುನಿರಾಜು, ಜಿ.ಮಂಜುನಾಥ್, ಕೆ.ಪಿ.ಆನಂದ್, ಸಾವಿತ್ರಮ್ಮ, ಸರೋಜಮ್ಮ, ಮುಖ್ಯ ಕಾರ್ಯನಿರ್ವಾಹಕರಾದ ರಾಜಣ್ಣ, ಹಾಲು ಪರೀಕ್ಷಕ ಕೆ.ಎನ್. ಪ್ರಕಾಶ್ , ಸ್ವಚ್ಛಗಾರಿಕೆ ಅಶ್ವಥಮ್ಮ ಹಾಗೂ ಹಾಲು ಉತ್ಪಾದಕರ ಉಪಸ್ಥಿತರಿದ್ದರು.
