Skip to content
Saturday, 3 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

ಗುತ್ತಿಗೆದಾರರ ಬದುಕಿಗೆ ಸರ್ಕಾರದ ‘ಕರೆಂಟ್ ಶಾಕ್’!

Share

ಚಿಕ್ಕಬಳ್ಳಾಪುರ: ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಗುತ್ತಿಗೆದಾರರ ಮೂಲಕ ನಿರ್ವಹಿಸುವ ಬದಲು ವಿದ್ಯುತ್ ಕಂಪನಿಗಳೇ ನೇರವಾಗಿ ಕೈಗೊಳ್ಳಲು ಅವಕಾಶ ಕಲ್ಪಿಸಿರುವ ರಾಜ್ಯ ಸರ್ಕಾರ ಹಾಗೂ ವಿದ್ಯುತ್ ಕಂಪನಿಗಳ ನೂತನ ಸುತ್ತೋಲೆ ವಿರುದ್ಧ ವಿದ್ಯುತ್ ಗುತ್ತಿಗೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಸ್. ಬಾಬು, ನೂತನ ಸುತ್ತೋಲೆಯಿಂದ ಗುತ್ತಿಗೆದಾರರ ಅಸ್ತಿತ್ವವೇ ಪ್ರಶ್ನಾರ್ಹವಾಗಿದೆ ಎಂದು ಹೇಳಿದರು.
ಸರಕಾರದ ಸುತ್ತೋಲೆಯಿಂದ ರಾಜ್ಯದ ಐದು ಲಕ್ಷಕ್ಕೂ ಅಧಿಕ ಗುತ್ತಿಗೆದಾರರು ಹಾಗೂ ಅವರನ್ನೇ ಅವಲಂಬಿಸಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಆರೋಪಿಸಿ, ಕೂಡಲೇ ಸುತ್ತೋಲೆ ವಾಪಸ್ ಪಡೆಯುವಂತೆ ಒತ್ತಾಯಿಸಿದರು.
ವಿದ್ಯುತ್ ಸಂಪರ್ಕ ಪಡೆಯಲು ಇನ್ನು ಮುಂದೆ ಗುತ್ತಿಗೆದಾರರ ಅಗತ್ಯವಿಲ್ಲ ಎಂಬ ರೀತಿಯಲ್ಲಿ ಸುತ್ತೋಲೆ ಹೊರಡಿಸಿರುವುದು ಸರಿಯಲ್ಲ. ಗ್ರಾಹಕರು ಮತ್ತು ರೈತರಿಗೆ ಹಲವು ವರ್ಷಗಳಿಂದ ಸಹಕಾರಿಯಾಗಿ ಗುತ್ತಿಗೆದಾರರು ಗುಣಮಟ್ಟದ ವಿದ್ಯುತ್ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಗುತ್ತಿಗೆದಾರರ ಮೂಲಕ ಕಾಮಗಾರಿ ನಡೆಸುವುದರಿಂದ ಗುಣಮಟ್ಟ ಹಾಗೂ ಸುರಕ್ಷತೆಯ ಮೇಲೂ ನಿಗಾ ಇರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಇದೇ ತಿಂಗಳ 10 ರಂದು
ಸಾಮೂಹಿಕವಾಗಿ ಕೆಇಆರ್‌ಸಿ ಸಂಸ್ಥೆಗೆ ಆಕ್ಷೇಪಣೆ ಸಲ್ಲಿಸಲು ತೆರಳುತ್ತಿದ್ದು, ಜಿಲ್ಲೆಯಿಂದಲೂ ಹೆಚ್ಚಿನ
ಗುತ್ತಿಗೆದಾರರು ಭಾಗವಹಿಸಬೇಕು.ಸರಕಾರ
ಈ ಜನವಿರೋಧಿ ಸುತ್ತೋಲೆಯನ್ನು ಕೂಡಲೇ
ಹಿಂಪಡೆಯದಿದ್ದರೆ,ಜಿಲ್ಲಾ ಮತ್ತು ತಾಲೂಕು
ಮಟ್ಟದಲ್ಲಿ ಕಾಮಗಾರಿ ಸ್ಥಗಿತಗೊಳಿಸಿ,
ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಭ್ರಷ್ಟಾಚಾರಕ್ಕೆ ದಾರಿ!!!
ವಿದ್ಯುತ್ ಸಂಪರ್ಕಕ್ಕಾಗಿ ಗ್ರಾಹಕರು ನೇರವಾಗಿ ಕಂಪನಿ ಅಧಿಕಾರಿಗಳನ್ನು ಸಂಪರ್ಕಿಸುವ ವ್ಯವಸ್ಥೆ ಜಾರಿಗೊಳಿಸುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶವಾಗಬಹುದು. ಕೆಲ ಅಧಿಕಾರಿಗಳು ಗ್ರಾಹಕರಿಂದ ನೇರವಾಗಿ ಹಣ ಪಡೆಯುವ ಪರಿಸ್ಥಿತಿ ನಿರ್ಮಾಣವಾಗುವ ಆತಂಕವಿದೆ. ಗುತ್ತಿಗೆದಾರರನ್ನು ವ್ಯವಸ್ಥೆಯಿಂದ ಹೊರಗಿಡುವ ಮೂಲಕ ಅವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಬಾಬು ಆರೋಪಿಸಿದರು.
ನೂರಾರು ವರ್ಷಗಳಿಂದ ವಿದ್ಯುತ್ ಕ್ಷೇತ್ರದ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಸೇವೆ ಸಲ್ಲಿಸುತ್ತಿದ್ದು, ಗ್ರಾಹಕರು ಮತ್ತು ರೈತರಿಗೆ ಅಗತ್ಯ ಸೇವೆ ಒದಗಿಸುತ್ತಿದ್ದಾರೆ. ಆದರೆ ಇದೀಗ ಸರ್ಕಾರ ಮತ್ತು ವಿದ್ಯುತ್ ಇಲಾಖೆ ಗುತ್ತಿಗೆದಾರರ ಹಿತಾಸಕ್ತಿಯನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿವೆ. ನಿಯಮ ಹಾಗೂ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಗುತ್ತಿಗೆದಾರರಿಗೆ ಕೆಲಸದ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಅನಿರ್ದಿಷ್ಟ ಮುಷ್ಕರದ ಎಚ್ಚರಿಕೆ!!!
ಸುತ್ತೋಲೆ ಹಿಂಪಡೆಯದಿದ್ದರೆ ಹೋರಾಟ ತೀವ್ರಗೊಳಿಸಲು ಗುತ್ತಿಗೆದಾರರ ಸಂಘ ನಿರ್ಧರಿಸಿದೆ. ಜಿಲ್ಲಾ ಹಾಗೂ ತಾಲೂಕು ಘಟಕಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಸಂಘದ ನೇತೃತ್ವದಲ್ಲಿ ಸುತ್ತೋಲೆ ವಿರುದ್ಧ ಸರ್ಕಾರಕ್ಕೆ ಅಹವಾಲು ಸಲ್ಲಿಸುವಂತೆ ಎಲ್ಲ ಗುತ್ತಿಗೆದಾರರಿಗೆ ಕರೆ ನೀಡಲಾಯಿತು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ
ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಅಂಜಿನಪ್ಪ.ಜಿ,ಬೈರಾ ರೆಡ್ಡಿ,ಜಿಲ್ಲಾ ಪ್ರಧನ ಕಾರ್ಯದರ್ಶಿ ಮಂಜುನಾಥ್,ಜಂಟಿ ಕಾರ್ಯದರ್ಶಿ ಪ್ರಸಾದ್,ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ನವೀನ್ ಕುಮಾರ್,ಉಪಾಧ್ಯಕ್ಷ ನಾರಾಯಣ ಸ್ವಾಮಿ, ಕಾರ್ಯದರ್ಶಿ ಸತೀಶ್ ಸ್ವಾಮಿ,ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಕೆ.ನಾರಾಯಣ ಸ್ವಾಮಿ,ಉಪಾಧ್ಯಕ್ಷ ಎಂ.ಶ್ರೀನಿವಾಸ್,ಕಾರ್ಯದರ್ಶಿ
ವಿ.ರಘು ಕುಮಾರ್,ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಎಸ್.ಜಿ. ಶಶಿಕುಮಾರ್,ಕಾರ್ಯದರ್ಶಿ ನಾಗರಾಜು,ಗುಡಿಬಂದೆ ತಾಲೂಕು ಅಧ್ಯಕ್ಷ ನರೇಂದ್ರ, ಕಾರ್ಯದರ್ಶಿ ನರಸಿಂಹ ಮುರ್ತಿ,ಗೌರಿಬಿದನೂರು ತಾಲೂಕು ಅಧ್ಯಕ್ಷ ಶ್ರೀನಿವಾಸ್,ಕಾರ್ಯದರ್ಶಿ ಅಂಬರೀಶ್ ಸೇರಿದಂತೆಹಲವರಿದ್ದರು.( ಮುಬಷೀರ್ ಅಹಮದ್ )

Written by

Bayalu Simha

Leave a Reply

Your email address will not be published. Required fields are marked *