ತಾಲ್ಲೂಕಿನ ಕಸಬಾ ಹೋಬಳಿಯ ಪವಿತ್ರ ಕ್ಷೇತ್ರ ಹೇಮಗಿರಿ ಬಿಜಿಎಸ್ ಎಜುಕೇಷನ್ ಸೆಂಟರ್ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವನ್ನು ಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಹೇಮಗಿರಿ ಬಿಜಿಎಸ್ ಶಾಖಾಮಠದ ಪ್ರಧಾನ ಕಾರ್ಯದರ್ಶಿ ಡಾ. ಜೆ.ಎನ್. ರಾಮಕೃಷ್ಣೇಗೌಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶ್ರೀಕೃಷ್ಣ ಪರಮಾತ್ಮ ಭಾರತದ ಸಂಸ್ಕೃತಿಯ ನಿಜವಾದ ರಾಯಭಾರಿ. ಮಕ್ಕಳಿಗೆ ಪುಸ್ತಕದ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿ, ಸಂಸ್ಕಾರ ಹಾಗೂ ಉತ್ತಮ ಮೌಲ್ಯಗಳನ್ನು ಕಲಿಸುವ ಉದ್ದೇಶದಿಂದ ಬಿಜಿಎಸ್ ಶಿಕ್ಷಣ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಸಂಸ್ಕಾರಯುತ ಬದುಕಿನ ಮೌಲ್ಯಗಳನ್ನು ಬೆಳೆಸುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಶಾಲೆಗೆ ಪೋಷಕರು ನೀಡುತ್ತಿರುವ ಸಹಕಾರ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ ಬಳ್ಳೆಕೆರೆ ಮಂಜುನಾಥ್ ಮಾತನಾಡಿ, ಡಾ. ಜೆ.ಎನ್. ರಾಮಕೃಷ್ಣೇಗೌಡ ಅವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ ಗ್ರಾಮೀಣ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಬಿಜಿಎಸ್ ಸಂಸ್ಥೆ ಶಿಕ್ಷಣದ ಜೊತೆಗೆ ಸಂಸ್ಕಾರ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಮಕ್ಕಳಿಗೆ ಶಾಲಾ ಹಂತದಲ್ಲಿಯೇ ರಾಮಾಯಣ, ಮಹಾಭಾರತ ಹಾಗೂ ಇತಿಹಾಸ ಪುರುಷರ ಜೀವನ ಚರಿತ್ರೆಗಳನ್ನು ಪರಿಚಯಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಶ್ರೀಕೃಷ್ಣನ ಜೀವನ ಸಂದೇಶ ಹಾಗೂ ಲೋಕಕಲ್ಯಾಣದ ಕಾರ್ಯಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪುಟಾಣಿ ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯ ಆಕರ್ಷಕ ವೇಷಭೂಷಣ ಧರಿಸಿ ವೇದಿಕೆಯಲ್ಲಿ ಕಂಗೊಳಿಸಿದರು.
ಕೊಳಲು ಹಿಡಿದ ಬಾಲಕೃಷ್ಣ, ಬೆಣ್ಣೆ ಕದ್ದ ಕೃಷ್ಣ ಸೇರಿದಂತೆ ವಿವಿಧ ವೇಷಗಳಲ್ಲಿ ಮಕ್ಕಳು ಗಮನ ಸೆಳೆದರು. ಕೃಷ್ಣನ ಭಕ್ತಿಗೀತೆಗಳಿಗೆ ಮಕ್ಕಳು ನೃತ್ಯ ಪ್ರದರ್ಶಿಸಿ ಸಂಭ್ರಮಿಸಿದರು.
ವಿಶೇಷವಾಗಿ ಮಕ್ಕಳ ಪೋಷಕರು ಸಹ ರಾಧಾ-ಕೃಷ್ಣರ ವೇಷದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೃಷ್ಣನ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ರಾಧಾ-ಕೃಷ್ಣ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ, ಪ್ರಮಾಣಪತ್ರ ಹಾಗೂ ಆಕರ್ಷಕ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆಯ ನಿಕಟಪೂರ್ವ ಅಧ್ಯಕ್ಷೆ ಪಂಕಜಾ ಪ್ರಕಾಶ್, ಹಿರಿಯ ಪತ್ರಕರ್ತರಾದ ಬಳ್ಳೆಕೆರೆ ಮಂಜುನಾಥ್, ಕೆ.ಆರ್. ನೀಲಕಂಠ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಜೀಗೆರೆ ಮಹೇಶ್, ಸಾಯಿಕುಮಾರ್, ಮನು ಮಾಕವಳ್ಳಿ, ಒಕ್ಕಲಿಗ ಮಹಿಳಾ ಅಧ್ಯಕ್ಷೆ ಮೂಡನಳ್ಳಿ ಮಧು, ಪ್ರಾಂಶುಪಾಲ ಪುನೀತ್ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.
