ಯಲಹಂಕ : ಯಲಹಂಕ ಉಪನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘದ 17ನೇ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಎಸ್.ಎನ್.ಸಂಪತ್‌ಕುಮಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ‘ಸಂಘವು ಪ್ರಸ್ತುತ 6 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, 2025-26ನೇ ಸಾಲಿನ ವರ್ಷಾಂತ್ಯಕ್ಕೆ ರೂ.3.92 ಕೋಟಿ ಶೇರು ಬಂಡವಾಳ ಹಾಗೂ ರೂ.134 ಕೋಟಿ ಠೇವಣಿ ಸಂಗ್ರಹವಾಗಿದೆ. ಒಟ್ಟು ರೂ.169 ಕೋಟಿ ದುಡಿಯುವ ಬಂಡವಾಳ ಕ್ರೋಡೀಕರಿಸಲಾಗಿದ್ದು, ವಿವಿಧ ರೀತಿಯ ಸಾಲಸೌಲಭ್ಯಗಳ ರೂಪದಲ್ಲಿ ರೂ.80.73 ಕೋಟಿ ಸಾಲ ವಿತರಿಸಲಾಗಿದೆ. ಸಂಘವು ಈ ಸಾಲಿನಲ್ಲಿ ರೂ.3 ಕೋಟಿ ನಿವ್ವಳ ಲಾಭ ಗಳಿಸಿದ್ದು, ವಾರ್ಷಿಕವಾಗಿ ಸುಮಾರು ರೂ.500 ಕೋಟಿ ವಹಿವಾಟು ನಡೆಸುತ್ತಿದೆ ಎಂದು ತಿಳಿಸಿದರು.

ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ಡಯಾಗ್ನೋಸ್ಟಿಕ್ ಕೇಂದ್ರ ಹಾಗೂ ಆಸ್ಪತ್ರೆ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೆ ಕಲ್ಯಾಣ ಮಂಟಪವನ್ನೂ ಸಹ ನಿರ್ಮಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಯಲಹಂಕ ಸುತ್ತಮುತ್ತ ಸೂಕ್ತ ಜಾಗದ ಹುಡುಕಾಟ ನಡೆಯುತ್ತಿದ್ದು, ಶೀಘ್ರದಲ್ಲೇ ಜಾಗ ಗುರುತಿಸಿ, ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಈ ವರ್ಷ ದೇವನಹಳ್ಳಿ ಅಥವಾ ದೊಡ್ಡಬಳ್ಳಾಪುರದಲ್ಲಿ ನೂತನ ಶಾಖೆ ಆರಂಭಿಸಲು ತೀರ್ಮಾನಿಸಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಎಂ.ಮೋಹನ್‌ಕುಮಾರ್ ಮಾತನಾಡಿ, ‘ಸದಸ್ಯರ ಸಹಕಾರ, ನಂಬಿಕೆ ಹಾಗೂ ವಿಶ್ವಾಸವೇ ಸಂಘದ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದೆ. ಮುಂದಿನ ದಿನಗಳಲ್ಲಿಯೂ ಸದಸ್ಯರ ವಿಶ್ವಾಸವನ್ನು ಉಳಿಸಿಕೊಂಡು ಪಾರದರ್ಶಕ ಆಡಳಿತ ನೀಡುವುದರೊಂದಿಗೆ ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಲಾಗುವುದು. ಸಂಘದಿಂದ ಗಳಿಸುವ ಲಾಭವನ್ನು ಕೇವಲ ಸಂಸ್ಥೆಯ ಬೆಳವಣಿಗೆಗೆ ಮಾತ್ರ ಸೀಮಿತಗೊಳಿಸದೆ ಸದಸ್ಯರ ಕಲ್ಯಾಣಕ್ಕೂ ಬಳಸಲಾಗುವುದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಾಮಾಜಿಕ ಸೇವೆ ಹಾಗೂ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ : ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ಹಾಗೂ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು. ಅಲ್ಲದೆ ನಿಧನರಾದ ಷೇರುದಾರರ ನಾಮಿನಿದಾರರಿಗೆ ಸಹಾಯಧನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಎಚ್.ರಾಜಣ್ಣ, ಸಿ.ಆರ್.ಜಯಪ್ಪರೆಡ್ಡಿ, ರತ್ನಮ್ಮ, ಎಸ್.ಜಿ.ನರಸಿಂಹಮೂರ್ತಿ, ಸತೀಶ್.ಕೆ.ವಿ, ಟಿ.ವೆಂಕಟರಾಮರೆಡ್ಡಿ, ಟಿ.ರಾಜಣ್ಣ, ಟಿ.ಎನ್.ಶ್ರೀನಿವಾಸ್, ಕೆ.ಜಿ.ರಾಮಕೃಷ್ಣಯ್ಯ, ನೀತಾ.ಎಂ.ಎನ್, ಸುಜಾತ.ಜಿ, ಜಿ.ನರಸಿಂಹಮೂರ್ತಿ, ಸಿ.ಶ್ರೀನಿವಾಸ್ ಹಾಗೂ ಸಿಇಒ ನಾಗೇಶ್.ಟಿ.ಆರ್ ಉಪಸ್ಥಿತರಿದ್ದರು.
