ಚಿಕ್ಕಬಳ್ಳಾಪುರ: ವಂದೇ ಮಾತರಂ ಬಿಜೆಪಿಯ ಆಸ್ತಿಯಲ್ಲ ಎಂದು ಸಾರಿಗೆ ಸಚಿವರೂ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿರುಗೇಟು ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಂದೇ ಮಾತರಂ ವಿಚಾರದಲ್ಲಿ ಯಾವುದೇ ವಿವಾದವಿಲ್ಲ ಎಂದರು.
ವಂದೇ ಮಾತರಂ ನಮಗೆಲ್ಲರಿಗೂ ಸೇರಿದ್ದು. ಇದು ಬಿಜೆಪಿ ಮತ್ತು ಬೇರೆ ಯಾರದ್ದೇ ಸ್ವತ್ತಲ್ಲ ಎಂದು ಸ್ಪಷ್ಟಪಡಿಸಿದರು.
ಇದು ಪ್ರತಿಯೊಬ್ಬ ಭಾರತೀಯನಿಗೂ ಸೇರಿದ್ದು. ಈ ವಿಚಾರದಲ್ಲಿ ಯಾವುದೇ ಗೊಂದಲವಾಗಲಿ ಅಥವಾ ವಿವಾದವಾಗಲಿ ಇಲ್ಲ ಎಂದು ಹೇಳಿದರು.
ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಹೋರಾಟ ಮಾಡುವ ಬಗ್ಗೆ ತಿಳಿದಿಲ್ಲ. ಆದರೆ, ವಂದೇ ಮಾತರಂ ಯಾರೊಬ್ಬರ ಸ್ವತ್ತಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕೆ ಮಾಡಲು, ಆರೋಪ ಮಾಡಲು ಬಿಜೆಪಿಗೆ ಯಾವುದೇ ಹಕ್ಕಿಲ್ಲ. ಸಚಿವರಾಗಿದ್ದ ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ ಬಿಜೆಪಿಯವರು ಪಾದಯಾತ್ರೆ ನಡೆಸಿದರು. ಆದರೆ ಇದರಿಂದ ಅವರೇನು ಸಾಧನೆ ಮಾಡಿದರು ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.
ಈಗ ವಂದೇ ಮಾತರಂ ವಿಚಾರದಲ್ಲಿ ಪಾದಯಾತ್ರೆ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಆದರೆ, ಇದೆಲ್ಲಾ ಅವರ ರಾಜಕೀಯ ಗಿಮಿಕ್ ಎಂದು ವ್ಯಂಗ್ಯವಾಡಿದರು.
ವಂದೇ ಮಾತರಂ ಬಿಜೆಪಿ ಸ್ವತ್ತಲ್ಲ: ಬೈರತಿ ಸುರೇಶ್ ಕಿಡಿ
