Skip to content
Sunday, 4 October 2026 | ಸತ್ಯವೇ ಶಕ್ತಿ • Truth is Strength
ಕನ್ನಡEnglishहिन्दीతెలుగుதமிழ்മലയാളം
ಜನರ ಪರ ಜನರ ಧ್ವನಿ VOICE OF THE PEOPLE
9845085793 7349337989 Editor: editorbayalusimha@gmail.com
ನಿಜವನ್ನು ಬಯಲಿಗೊಳಿಸುವುದು ನಮ್ಮ ಧ್ಯೇಯ • Our Mission is to Expose the Truth

29ನೇ ಮಹೋತ್ಸವದ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮ: ಭಕ್ತರ ಅನುಕೂಲಕ್ಕಾಗಿ ಉಚಿತ ಆಟೋ ಸೇವೆ

Share

ಚಿಕ್ಕಬಳ್ಳಾಪುರ: ನಗರದ ಮುನ್ಸಿಪಲ್ ಬಡಾವಣೆಯ ಶ್ರೀ ಸಿದ್ಧಿ ವಿನಾಯಕ ಗೆಳೆಯರ ಸಂಘದ ವತಿಯಿಂದ 29ನೇ ವರ್ಷದ ಗಣೇಶೋತ್ಸವವನ್ನು ಸೆ.15ರಿಂದ 25ರವರೆಗೆ ವಿವಿಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದ್ದು, ಈ ಬಾರಿ ಪ್ರಥಮ ಬಾರಿಗೆ ‘ವರಾಹ ವೈಭವಹಾರ ಪವಿತ್ರೋತ್ಸವ’ವನ್ನು ವಿಶೇಷವಾಗಿ ಆಯೋಜಿಸಲಾಗಿದೆ ಎಂದು ಸಂಘದ ಮುಖಂಡ ಗೋದಾನಿ ಹರೀಶ್ ರೆಡ್ಡಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಘ್ನೇಶ್ವರನು ಸನಾತನ ಧರ್ಮದ ಪ್ರಥಮ ವಂದಿತ ದೇವತೆಯಾಗಿದ್ದು, ಗಣೇಶೋತ್ಸವವು ವಯಸ್ಸು, ಮತ-ಧರ್ಮದ ಭೇದವಿಲ್ಲದೆ ಜನರನ್ನು ಒಗ್ಗೂಡಿಸುವ ಭಕ್ತಿಯ ಹಬ್ಬವಾಗಿದೆ. ಈ ಪರಂಪರೆಯನ್ನು ಶ್ರದ್ಧೆ, ಭಕ್ತಿ ಹಾಗೂ ಸೌಹಾರ್ದತೆಯಿಂದ ಮುಂದುವರಿಸುವ ಉದ್ದೇಶದಿಂದ 29ನೇ ವರ್ಷದ ಗಣೇಶೋತ್ಸವವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮೂರು ವರ್ಷಗಳ ತಪಸ್ಸಿನ ಫಲ!!
ಎಸ್‌ಎಸ್‌ವಿಜಿಎಸ್ ತಂಡದ ವಿಶೇಷ ಪರಿಕಲ್ಪನೆಯಾದ ‘ವರಾಹ ವೈಭವಹಾರ ಪವಿತ್ರೋತ್ಸವ’ಕ್ಕಾಗಿ ಕಳೆದ ಮೂರು ವರ್ಷಗಳಿಂದ ಅತ್ಯಂತ ಶುದ್ಧವಾದ ರೇಷ್ಮೆಗೂಡಿನಿಂದ ಪವಿತ್ರ ಹಾರವನ್ನು ಸಿದ್ಧಪಡಿಸಲಾಗಿದೆ. ಈ ಬಾರಿ ಬ್ರಹ್ಮಕಲಶ ಹಾಗೂ ಶ್ರೀಚಕ್ರದ ದಿವ್ಯಸ್ಪರ್ಶದೊಂದಿಗೆ ಶಾಸ್ತ್ರೋಕ್ತ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುವುದು. ಕುಂಭಕೋಣಂ ಮತ್ತು ಚಿದಂಬರಂನ ಮಹಾ ಅರ್ಚಕರ ತಂಡದ ನೇತೃತ್ವದಲ್ಲಿ ಈ ಧಾರ್ಮಿಕ ಪ್ರಕ್ರಿಯೆ ನಡೆಯಲಿದೆ ಎಂದು ಹರೀಶ್ ರೆಡ್ಡಿ ವಿವರಿಸಿದರು.
ಗಣೇಶೋತ್ಸವದ ಅಂಗವಾಗಿ ವಿವಿಧ ಹೋಮ, ಹವನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಜನತೆಗೆ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಸಕಲರ ಒಳಿತಿಗಾಗಿ ಪ್ರತಿದಿನವೂ ಸಂಕಲ್ಪ ಕೈಗೊಳ್ಳಲಾಗುವುದು ಎಂದರು.

ಭಕ್ತರಿಗಾಗಿ ಉಚಿತ ಆಟೋ ಸೇವೆ!!
ಸೆ.15ರಿಂದ 25ರವರೆಗೆ ಗಣೇಶನ ದರ್ಶನ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮಹಿಳೆಯರು ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ನಗರದ ವಿವಿಧ ಭಾಗಗಳಿಂದ ಮುನ್ಸಿಪಲ್ ಬಡಾವಣೆಗೆ ಉಚಿತ ಆಟೋ ಸೇವೆಯನ್ನು ವ್ಯವಸ್ಥೆ ಮಾಡಲಾಗಿದೆ. ಭಕ್ತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸಿದ್ಧಿ ವಿನಾಯಕ ಗೆಳೆಯರ ಬಳಗದ ಕಿರಣ್ ಮಾತನಾಡಿ, ವಿಶ್ವವಿಖ್ಯಾತ ವಿಜ್ಞಾನಿ ಸರ್ ಎಂ. ವಿಶ್ವೇಶ್ವರಯ್ಯ ಅವರಿಂದ ಚಿಕ್ಕಬಳ್ಳಾಪುರದ ಹೆಸರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವಂತೆ, ನಗರದ ಗಣೇಶೋತ್ಸವವೂ ಧಾರ್ಮಿಕ ಭಾವನೆ, ಸನಾತನ ಧರ್ಮದ ಮೌಲ್ಯ ಹಾಗೂ ಭಕ್ತಿಯ ಪರಂಪರೆಯನ್ನು ಸಾರುವ ಉತ್ಸವವಾಗಿ ಗುರುತಿಸಿಕೊಳ್ಳಬೇಕು ಎಂಬುದು ಸಂಘದ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಗಣೇಶ ಸೇವಾ ಸಮಿತಿಗಳು ಸಹಕಾರ ನೀಡುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಮಳೆ–ಬೆಳೆ ಸಮೃದ್ಧಿಗೆ ಮಹಿಳೆಯರ ಸಂಕಲ್ಪ!!
ಸಿದ್ಧಿವಿನಾಯಕ ಮಹಿಳಾ ಸಂಘದ ಎಂ.ಕೆ. ಗಾಯತ್ರಿ ಮಾತನಾಡಿ, ಜಿಲ್ಲೆ ಮಾತ್ರವಲ್ಲದೆ ರಾಜ್ಯದಾದ್ಯಂತ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಜನರ ಸುಖ-ಸಮೃದ್ಧಿಗಾಗಿ ಪ್ರತಿದಿನವೂ ಗಣೇಶನ ಸನ್ನಿಧಿಯಲ್ಲಿ ಸಂಕಲ್ಪ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಶ್ರೀ ಸಿದ್ಧಿ ವಿನಾಯಕ ಗೆಳೆಯರ ಸಂಘದ ಪದಾಧಿಕಾರಿಗಳು ಹಾಗೂ ಮಹಿಳಾ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.( ಮುಬಷೀರ್ )

Written by

Bayalu Simha

Leave a Reply

Your email address will not be published. Required fields are marked *