ಬಂಗಾರಪೇಟೆ: ಸಹಕಾರಿ ಸಂಘಗಳ ಮಾತೃ ಸಂಸ್ಥೆಯಾದ ಡಿಸ್ಟ್ರಿಕ್ಟ್ ಕ್ರೆಡಿಟ್ ಕೋ-ಆಪರೇಟಿವ್ (ಡಿ.ಸಿ.ಸಿ.) ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಮುಗಿದು ಒಂದು ವರ್ಷ ಕಳೆದರೂ ರಾಜಕೀಯ ಬಿಕ್ಕಟ್ಟಿನಿಂದಾಗಿ ಅಧ್ಯಕ್ಷರ ನೇಮಕಾತಿಯಾಗಿರಲಿಲ್ಲ. ಇದರಿಂದಾಗಿ ಸಹಕಾರಿ ಸಂಘಗಳಿಗೆ ಯಾವುದೇ ಸರ್ಕಾರಿ ಅನುದಾನ ತಲುಪದೆ, ರೈತರಿಗೆ ಹಾಗೂ ಸಾರ್ವಜನಿಕರಿಗೆ ಸಾಲ ನೀಡಲು ಸಾಧ್ಯವಾಗಿರಲಿಲ್ಲ ಎಂದು ವಿ ಎಸ್ ಎಸ್ ಎನ್ ಅಧ್ಯಕ್ಷ ಚಿಕ್ಕ ಹೊಸಹಳ್ಳಿ ಬಿ. ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಹುಲಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಸ್ತುತ ಡಿ.ಸಿ.ಸಿ. ಬ್ಯಾಂಕಿನಲ್ಲಿದ್ದ ರಾಜಕೀಯ ಗೊಂದಲಗಳು ಬಗೆಹರಿದಿವೆ. ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್ ಅವರು ಅಧ್ಯಕ್ಷರಾಗಿ ಹಾಗೂ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಸರ್ಕಾರದ ನಾಮನಿರ್ದೇಶಿತ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇಬ್ಬರೂ ನಾಯಕರು ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿ ಸಹಕಾರಿ ಸಂಘಕ್ಕೂ ಹೆಚ್ಚಿನ ಅನುದಾನ ತಂದುಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ರೈತರಿಗೆ 2.5 ಲಕ್ಷ ರೂಪಾಯಿಗಳವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿತ್ತು. ಈಗಿನ ಸರ್ಕಾರದಲ್ಲಿ ಸಾಲದ ಮಿತಿಯನ್ನು 5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದ್ದು, ಶೂನ್ಯ ಬಡ್ಡಿ ದರದಲ್ಲೇ ಸಾಲ ಸೌಲಭ್ಯ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಸಾಲ ಮನ್ನಾ ಭ್ರಮೆಯಲ್ಲಿ ರೈತರು:
ಇದೇ ವೇಳೆ ರೈತರ ಸಾಲ ಮರುಪಾವತಿ ಮನೋಭಾವದ ಬಗ್ಗೆ ಮಾತನಾಡಿದ ಅವರು, ಹಲವು ರೈತರು ಸರ್ಕಾರ ಸಾಲ ಮನ್ನಾ ಮಾಡಬಹುದು ಎಂಬ ಭ್ರಮೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರಿಂದ ಪಡೆದ ಸಾಲವನ್ನು ಮರುಪಾವತಿಸಲು ಹಿಂಜರಿಯುತ್ತಿದ್ದು, ಸಹಕಾರಿ ಸಂಘಗಳು ದಿವಾಳಿಯಾಗುವ ಭೀತಿ ಎದುರಾಗಿದೆ. ರೈತರು ಇಂತಹ ಭ್ರಮೆಗಳಿಂದ ಹೊರಬಂದು, ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಸಹಕಾರಿ ಸಂಸ್ಥೆಗಳನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.
ಸಾಲ ಮರುಪಾವತಿಸಿ, ಸಂಸ್ಥೆ ಉಳಿಸಿ:
ನಮ್ಮ ಸಂಘವು ಇದುವರೆಗೆ ರೈತರಿಗೆ ಸುಮಾರು ಏಳು ಕೋಟಿ ರೂಪಾಯಿಗಳ ಸಾಲ ವಿತರಿಸಿದೆ. ಆದರೆ, ಸಾಲ ಪಡೆದ ಫಲಾನುಭವಿಗಳು ಮರುಪಾವತಿ ಮಾಡಲು ಮೀನಾಮೇಷ ಎಣಿಸುತ್ತಿರುವುದು ದುರದೃಷ್ಟಕರ. ಹೊಸ ಆಡಳಿತ ಮಂಡಳಿಯ ನೇತೃತ್ವದಲ್ಲಿ ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸಲಾಗುವುದು. ಮುಂಬರುವ ದಿನಗಳಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಹಾಗೂ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ತಲುಪಿಸುವ ಕಾರ್ಯವನ್ನು ನಿರಂತರವಾಗಿ ನಡೆಸಲಾಗುವುದು ಎಂದರು.
ಸಭೆಯಲ್ಲಿ ಪಿ ಎಲ್ ಡಿ ಬ್ಯಾಂಕ ಮಾಜಿ ಅಧ್ಯಕ್ಷ ಎಚ್.ಕೆ. ನಾರಾಯಣಸ್ವಾಮಿ, ವೀಣಾ ವೆಂಕಟೇಶ್,ಸಂಘದ ಉಪಾಧ್ಯಕ್ಷ ರಾಜಪ್ಪ, ನಿರ್ದೇಶಕರಾದ ಬಿ. ವೆಂಕಟೇಶಪ್ಪ, ಅಶ್ವತ್ಥಪ್ಪ, ಜನಾರ್ಧನ್, ರಾಮಕೃಷ್ಣ, ರಾಮಪ್ಪ, ವೆಂಕಟೇಶಪ್ಪ, ಅಪ್ಪಾಲಪ್ಪ, ಮಂಜುನಾಥ್, ಜಯಂತಿ, ನಾರಾಯಣಮ್ಮ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಆರ್.ಮಂಜುನಾಥ್ ಗೌಡ, ಮಾರಾಟ ಗುಮಾಸ್ತ ಎಂ. ಸುಬ್ರಮಣಿ, ಸಹಾಯಕ ಎಚ್.ಡಿ. ರಂಗನಾಥ್, ಕಂಪ್ಯೂಟರ್ ಸಹಾಯಕಿ ಜಯಸುಧಾ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
